ಉಡುಪಿ, ಏ 13(SM): ಯಡಿಯೂರಪ್ಪನವರು ಬಿಜೆಪಿ ಪಕ್ಷವನ್ನು ತೊರೆದು ಕೆಜೆಪಿ ಕಟ್ಟಿದಾಗ ಶೋಭಾ ಕರಂದ್ಲಾಜೆಯವರು ಕೂಡಾ ಬಿಜೆಪಿಗೆ ಡೈವೋರ್ಸ್ ನೀಡಿದ್ದರು. ತದನಂತರ ಕೆಜೆಪಿಯಿಂದ ರಾಜಾಜಿನಗರದಲ್ಲಿ ಸ್ಪರ್ಧಿಸಿ ಹೀನಾಯವಾಗಿ ಸೋಲು ಕಂಡಿರುವುದು ಜನತೆ ಇನ್ನೂ ಮರೆತಿಲ್ಲ. ದುರ್ಬಲರನ್ನು ಬಲಾಡ್ಯರನ್ನಾಗಿ ಮಾಡುವ ಬಲಾಡ್ಯರನ್ನು ದುರ್ಬಲರನ್ನಾಗಿ ಮಾಡುವ ಶಕ್ತಿ ಜನತೆಗಿದೆ ಎಂದು ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಅವರು, ಆ ಬಲಾಢ್ಯ ಶಕ್ತಿಯೇ ನನಗೆ ದೃಢತೆ ನೀಡಿದೆ. ಹಾಲು ಜೇನಿನಂತೆ ಒಗ್ಗೂಡಿದ ಕಾಂಗ್ರೆಸ್ ಜೆಡಿಎಸ್ ಮೈತ್ರಿಕೂಟದಲ್ಲಿ ಸ್ಪರ್ಧಿಸುವ ನನ್ನ ಬಗ್ಗೆ ಶೋಭಾರವರಿಗೆ ಮಾತನಾಡುವ ಯಾವ ನೈತಿಕತೆಯೂ ಉಳಿದಿಲ್ಲ. ಕಳೆದ ಬಾರಿ ಮೋದಿ ಅಲೆಯಲ್ಲಿ ಗೆದ್ದವರು ಯಾವುದೇ ಅಭಿವೃದ್ಧಿ ಕೆಲಸ ಮಾಡದೆ ಜನರ ಸಮಸ್ಯೆಗೆ ಸ್ಪಂದಿಸದೆ ಜನತೆಗೆ ನಿರಾಸೆ ಮೂಡಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಪಕ್ಷದ ಧೀಮಂತ ನಾಯಕಿ ಇಂದಿರಾ ಗಾಂಧಿಯವರು ದೇಶಕ್ಕೆ ಕೊಟ್ಟ ಕೊಡುಗೆಯನ್ನು ಜನತೆ ಇಂದೂ ನೆನಪಿಸಿಕೊಳ್ಳುತ್ತದೆ. ಆದರೆ ಮೈತ್ರಿ ಪಕ್ಷದ ಅಭ್ಯರ್ಥಿಗಳು ಇಂದಿರಾ ಗಾಂಧಿಗೆ ಮತ ನೀಡಿ ಎಂದು ಮತಯಾಚಿಸುವುದಿಲ್ಲ. ಪ್ರಧಾನಿ ಮೋದಿಯವರ ಆಡಳಿತ ಅವಧಿಯಲ್ಲಿ ದೇಶ ಕಂಡ ಆರ್ಥಿಕ ಸಂಕಷ್ಟ ಮತ್ತು ನಿರುದ್ಯೋಗ ಸಮಸ್ಯೆಯ ಉಲ್ಬಣಗಳು ಹಾಗೂ ದೇಶದ ಗಡಿ ಭಾಗಗಳಲ್ಲಿ ಉಗ್ರಗಾಮಿಗಳ ನುಸುಳುವಿಕೆ, ಸೈನಿಕರ ಸಾವು ಮತ್ತು ವಿವಿಧ ಧರ್ಮೀಯರಲ್ಲಿ ನಡೆದ ಘರ್ಷಣೆಗಳು ನಡೆದಿರುವುದು ಬಲಿಷ್ಟ ಭಾರತದ ಸಂಕೇತವೇ? ಎಂದು ಶೋಭಾರವರು ಉತ್ತರಿಸಬೇಕಾಗಿದೆ ಎಂದು ಪ್ರಶ್ನಿಸಿದರು.