ಉಡುಪಿ, ಏ 13(SM): ಎಪ್ರಿಲ್ 18 ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ, ಚುನಾವಣಾ ಆಯೋಗದ ನಿರ್ದೇಶನದಂತೆ ಒಳಗೊಳ್ಳುವ ಹಾಗೂ ಸುಗಮ ಚುನಾವಣೆಗಳ ಆಶಯದ ನಿಟ್ಟಿನಲ್ಲಿ ಜಿಲ್ಲಾಡಳಿತದ ವತಿಯಿಂದ ಉಡುಪಿಯಲ್ಲಿ ಅಂಗವಿಕಲರಿಗಾಗಿ ವಿಶೇಷ ಸೌಲಭ್ಯಗಳುಳ್ಳ 2 ಮತಗಟ್ಟೆಯನ್ನು ಪ್ರಾರಂಭಿಸಲಾಗುತ್ತಿದೆ.
ಈ ಮತಗಟ್ಟೆಗಳು ಅಂಗವಿಕಲ ಸಿಬ್ಬಂದಿಗಳಿಂದ ನಿರ್ವಹಿಸುವ ಮತಗಟ್ಟೆಗಳಾಗಿದ್ದು, ಇವುಗಳನ್ನು ಮಾದರಿ ಮತಗಟ್ಟೆಗಳನ್ನಾಗಿ ರೂಪಿಸಲಾಗುತ್ತಿದೆ. ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಮತ್ತು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷೆ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಿಂಧೂ ಬಿ ರೂಪೇಶ್ ಅವರ ಮಾರ್ಗದರ್ಶನದಲ್ಲಿ ಈ ಮತಗಟ್ಟೆಗಳನ್ನು ಪ್ರಾರಂಬಿಸಲಾಗಿದೆ.
ಜಿಲ್ಲೆಯಲ್ಲಿ 119 ಕುಂದಾಪುರ ವಿಧಾನಸಭಾ ಕ್ಷೇತ್ರದ ಭಾಗ 217 ಕೋಡಿ ಕನ್ಯಾಣ , ಗ್ರಾಮ ಪಂಚಾಯತ್ ಕಚೇರಿ, ಮತ್ತು 120 ಉಡುಪಿ ವಿಧಾನಸಭಾ ಕ್ಷೇತ್ರದ ಭಾಗ 152 ರ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಹನುಮಂತನಗೆ ಪುತ್ತೂರು ಇಲ್ಲಿ ಅಂಗವಿಕಲ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದ್ದು, ಈ ಮತಗಟ್ಟೆಯಲ್ಲಿ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಂಡು, ಸುಗಮ ಚುನಾವಣೆ ನಡೆಸಲು ನೋಡೆಲ್ ಆಧಿಕಾರಿಗಳನ್ನು ನೇಮಿಸಲಾಗಿದೆ.
ಈ ಅಧಿಕಾರಿಗಳು ಅಂಗವಿಕಲ ಮತಗಟ್ಟೆಗಳಲ್ಲಿ ಸೂಕ್ತ ವಿದ್ಯುತ್ ವ್ಯವಸ್ಥೆ, ಫ್ಯಾನ್ ವ್ಯವಸ್ಥೆ, ವಿಕಲಚೇತನ ಸ್ನೇಹಿ ಶೌಚಾಲಯ ಹಾಗೂ ಸೂಕ್ತ ನೀರಿನ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ವೀಲ್ ಚೇರ್ ವ್ಯವಸ್ಥೆ, ಮತಗಟ್ಟೆಗೆ ಸ್ವಯಂ ಸೇವಕರ ನಿಯೋಜನೆ, ಸ್ವಯಂ ಸೇವಕರಿಗೆ ಗುರುತಿನ ಚೀಟಿ ವ್ಯವಸ್ಥೆ, ವಿಶೇಷ ಚೇತನರು ಮತ್ತು ಅಶಕ್ತರು ಮತಗಟ್ಟೆಗೆ ಬರಲು ಮತ್ತು ವಾಪಸ್ ಮನೆಗೆ ಹೋಗಲು ಸೂಕ್ತ ವಾಹನ ವ್ಯವಸ್ಥೆ, ವಾಹನ ನಿಲ್ಲಿಸಲು ಸೂಕ್ತ ಪಾರ್ಕಿಂಗ್ ವ್ಯವಸ್ಥೆ, ಮತಗಟ್ಡೆಯ ಹೊರಗೆ ಮತದಾನ ಸಹಾಯ ಕೇಂದ್ರ ಸ್ಥಾಪನೆ ಕುರಿತು ಮತದಾನಕ್ಕೆ 2 ದಿನ ಮುಂಚೆ ಪರಿಶೀಲಿಸಿ ಎಲ್ಲಾ ವ್ಯವಸ್ಥೆ ಮಾಡಲು ಸೂಚಿಸಲಾಗಿದೆ.
ಅಲ್ಲದೇ ಈ ಮತಗಟ್ಟೆಗಳಲ್ಲಿ ಅಂಗವಿಕಲರಿಗೆ ತುರ್ತು ಚಿಕಿತ್ಸೆಗಾಗಿ ಆರೋಗ್ಯ ಸಹಾಯಕಿಯರ ಮೂಲಕ ಪ್ರಥಮ ಚಿಕಿತ್ಸಾ ಕೇಂದ್ರ ಸ್ಥಾಪನೆ, ಮತದಾರರು ಕಾಯುವಿಕೆಯ ಸಮಯದಲ್ಲಿ ಕುಳಿತುಕೊಳ್ಳಲು ಕುರ್ಚಿ ಹಾಗೂ ನೆರಳಿನ ವ್ಯವಸ್ಥೆ, ಮತಗಟ್ಟೆಯ ನೆಲಕ್ಕೆ ಮ್ಯಾಟ್ ಅಳವಡಿಕೆ, ಅಂಗವಿಕಲರಿಗೆ ಅಗತ್ಯವಿರುವ ಸಾಧನ ಸಲಕರಣೆಗಳು ಇಲ್ಲಿ ಒಳಗೊಂಡಿವೆ.