ಚೆನ್ನೈ: ಎಐಎಡಿಎಂಕೆಯ ಉಚ್ಚಾಟಿತ ನಾಯಕಿ ವಿ.ಕೆ. ಶಶಿಕಲಾಗೆ ಸಂಬಂಧಿಸಿದ ಆಸ್ತಿಗಳ ಮೇಲೆ ಐಟಿ ಅಧಿಕಾರಿಗಳು ನಡೆಸಿದ ದಾಳಿ ಸತತ ನಾಲ್ಕು ದಿನಗಳ ಬಳಿಕ ಮುಕ್ತಾಯವಾಗಿದ್ದು, ಈ ವೇಳೆ ಶಶಿಕಲಾ ಅವರಿಗೆ ಸಂಬಂಧಿಸಿದ ಶೆಲ್ ಕಂಪನಿಗಳ ಸುಮಾರು 100 ಬ್ಯಾಂಕ್ ಖಾತೆಗಳನ್ನು ಐಟಿ ಅಧಿಕಾರಿಗಳು ಸ್ಥಗಿತಗೊಳಿಸಿದ್ದಾರೆ.ಜಯ ಟಿ.ವಿ ಎಂ ಡಿ ವಿವೇಕ್ ಜಯರಾಮನ್ 20 ಕ್ಕೂ ಅಧಿಕ ಕಂಪನಿಗಳ ಹೆಸರಿನಲ್ಲಿ ಬ್ಯಾಂಕ್ ಖಾತೆ ಹೊಂದಿರುವುದು ದಾಖಲೆಗಳ ಪರಿಶೀಲನೆ ವೇಳೆ ತಿಳಿದು ಬಂದಿದೆ. ಜತೆಗೆ ಕಾಲೇಜೊಂದರ ಹಾಸ್ಟೆಲ್ ಕಾಪಾಟಿನಿಂದ ಬಹುಕೋಟಿ ಮೌಲ್ಯದ ವಜ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇನ್ನು ಪ್ರಸ್ತುತ ದಾಳಿ ಮುಕ್ತಾಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದು, ದಾಳಿ ವೇಳೆ ದೊರೆತ ಕಾಗದ ಪತ್ರಗಳ ಪರಿಶೀಲನೆ ನಡೆಯಬೇಕಿದೆ. ಅಂತೆಯೇ ಅದಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುವ ಪ್ರಕ್ರಿಯೆ ಮಾತ್ರ ಬಾಕಿ ಉಳಿದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದೇ ವೇಳೆ ಐಟಿ ದಾಳಿ ರಾಜಕೀಯ ಪ್ರೇರಿತವಲ್ಲ ಎಂದು ಸ್ಪಷ್ಟ ಪಡಿಸಿರುವ ಅಧಿಕಾರಿಗಳು, ದಾಳಿ ನಡೆಸಿದ್ದರಲ್ಲಿ ಯಾವ ಸಂಚೂ ಇಲ್ಲ. ಸೂಕ್ತ ಮಾಹಿತಿ ಮತ್ತು ದಾಖಲೆಗಳ ಆಧಾರದಲ್ಲಿಯೇ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.