ಉಡುಪಿ, ಏ 14(SM): ಈ ಬಾರಿಯ ಚುನಾವಣೆ ದೇಶದ ಭವಿಷ್ಯವನ್ನು ತೀರ್ಮಾನಿಸಲಿದೆ. ದೇಶದಲ್ಲಿ ಭಾವನಾತ್ಮಕವಾಗಿ ಜನರನ್ನು ದಿಕ್ಕುತಪ್ಪಿಸುವ ಶಕ್ತಿಗಳನ್ನು ದೂರ ಇಟ್ಟು ಪ್ರಜಾಪ್ರಭುತ್ವದ ಆಶಯ ಎತ್ತಿ ಹಿಡಿಯುವವರಿಗೆ ಮತ ಚಲಾಯಿಸಬೇಕೆಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ.
ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜರ ಪರ ಮತಯಾಚನೆ ನಡೆಸಿ ಮಾತನಾಡಿದ ಅವರು, ದೇಶದ ಐದು ಕೋಟಿ ಬಡ ಕುಟುಂಬಕ್ಕೆ ಮಾಸಿಕ 6000 ರೂಪಾಯಿಗಳನ್ನು ನೀಡುವ ಮೂಲಕ ಕನಿಷ್ಠ ಆದಾಯ ಕಲ್ಪಿಸಲಾಗುವುದು. ಈ ಯೋಜನೆಯಡಿ ವಾರ್ಷಿಕ 72,000 ರೂಪಾಯಿ ನೀಡಲಾಗುವುದು. ರೈತರಿಗೆ ಸಾಲ ಮನ್ನಾ, ಸಾಲ ಮುಕ್ತಿ ಯೋಜನೆ, ಪ್ರತ್ಯೇಕ ಬಜೆಟ್ ಮಂಡನೆ, ಒಂದೇ ಸ್ಲ್ಯಾಬ್ನ ಅಡಿ ಜಿ.ಎಸ್.ಟಿ.ಯನ್ನು ತಂದು ರೈತರಿಗೆ ಹಾಗೂ ಬಡ ಮಧ್ಯಮ ಜನತೆ ಸಂತೃಪ್ತಿಯ ಜೀವನ ಸಾಗಿಸುವಂತೆ ಕಾಂಗ್ರೆಸ್ ಕ್ರಮ ಕೈಗೊಳ್ಳಲಿದೆ ಎಂದರು.
ಯಾವುದೇ ಹೊಸ ಉದ್ಯಮಗಳಿಗೆ ಮೊದಲ 3 ವರ್ಷ ಅನುಮತಿ ಕಡ್ಡಾಯವನ್ನು ರದ್ದುಗೊಳಿಸಿ ಹೊಸ ಉದ್ಯಮಗಳಿಗೆ ಪ್ರೋತ್ಸಾಹ ನೀಡಲಾಗುವುದು. 2020ರ ಒಳಗೆ ಖಾಲಿ ಇರುವ 22 ಲಕ್ಷ ಸರಕಾರಿ ಹುದ್ದೆಗಳ ಭರ್ತಿಯೊಂದಿಗೆ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದ ಅವರು ಈ ಬಾರಿ ಪ್ರಮೋದ್ ಮಧ್ವರಾಜ್ ಗೆ ಗೆಲುವು ಖಚಿತ, ಲೋಕಸಭಾ ಕ್ಷೇತ್ರದ ಅಭಿವೃದ್ಧಿ ನಿಶ್ಚಿತ ಎಂದು ವಿನಯ ಕುಮಾರ್ ಸೊರಕೆ ಹೇಳಿದ್ದಾರೆ.