ಮೂಡುಬಿದಿರೆ, ನ 13 : ಹೊಸ ಮಾರುಕಟ್ಟೆ ನಿರ್ಮಾಣಕ್ಕೆ ಪೂರಕವಾಗಿ ಮೂಡುಬಿದಿರೆ ಹಳೇ ಮಾರುಕಟ್ಟೆ ತೆರವುಗೊಳಿಸುವ ಹಾಗೂ ಸ್ವರಾಜ್ಯ ಮೈದಾನದಲ್ಲಿ ಕಲ್ಪಿಸಲಾಗಿರುವ ತಾತ್ಕಲಿಕ ಮಾರುಕಟ್ಟೆಗೆ ಸ್ಥಳಾಂತರಗೊಳಿಸುವ ಪ್ರಕ್ರಿಯೆಗೆ ಸೋಮವಾರ ಚಾಲನೆ ದೊರೆತಿದೆ.
ಸ್ವರಾಜ್ಯ ಮೈದಾನದಲ್ಲಿ ತಾತ್ಕಲಿಕ ಮಾರುಕಟ್ಟೆ ಉದ್ಘಾಟನೆ ಸಂದರ್ಭದಲ್ಲಿ ಸ್ವರಾಜ್ಯ ಮೈದಾನ ಉಳಿಸಿ ಹೋರಾಟ ಸಮಿತಿಯವರು, ಕರಿ ಪತಾಕೆ ಹಿಡಿದು ಪ್ರತಿಭಟನೆ ನಡೆಸಿದರು. ಈ ಸಂದರ್ಭ ಪುರಸಭಾ ಅಧಿಕಾರಿಗಳು ಹಾಗೂ ಹೋರಾಟಗಾರರ ನಡುವೆ ಮಾತಿನ ಚಕಾಮಕಿ ನಡೆಯಿತು. ಪರಿಸ್ಥಿತಿ ಉದ್ವಿಗ್ನಕ್ಕೇರುವ ಸಂದರ್ಭ ಪೊಲೀಸರು ಹೋರಾಟಗಾರರನ್ನು ಬಂಧಿಸಿದ್ದರು. ಮತ್ತೊಂದೆಡೆ ಹಳೇ ಮಾರುಕಟ್ಟೆ ಸ್ಥಳದಲ್ಲಿಯೂ ಅಧಿಕಾರಿಗಳ ಜೊತೆ ಮಾತಿನ ಚಕಾಮಕಿ ಉಂಟಾಯಿತು. ಮೂಡುಬಿದಿರೆ ಎಲ್ಲೆಡೆ ಪೊಲೀಸ್ ಬಿಗು ಬಂದೋಬಸ್ತ್ ವ್ಯವಸ್ಥೆ ಮಾಡಲಾಯಿತು. ಹಳೇ ಮಾರುಕಟ್ಟೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿ, ಜೆಸಿಬಿ ಮೂಲಕ ಕಟ್ಟಡಗಳನ್ನು ಕೆಡವುವ ಕೆಲಸವನ್ನು ಪ್ರಾರಂಭಿಸಲಾಯಿತು.