ಉಳ್ಳಾಲ, ಏ 14(SM): ಶನಿವಾರ ಸಂಜೆ ಮದನಿ ನಗರದಲ್ಲಿ ನಡೆದ ಘರ್ಷಣೆಗೆ ಕಾಂಗ್ರೆಸ್ನವರೇ ಪ್ರಮುಖ ಕಾರಣ ಎಂದು ಬಿಜೆಪಿ ಮಂಗಳೂರು ಕ್ಷೇತ್ರದ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ಆರೋಪಿಸಿದರು. ಬಿಜೆಪಿ ಮಂಗಳೂರು ಕ್ಷೇತ್ರದ ತೊಕ್ಕೊಟ್ಟು ಕಾಪಿಕಾಡಿನ ಚುನಾವಣಾ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಮಂಗಳೂರಿನ ನೆಹರೂ ಮೈದಾನದಲ್ಲಿ ಶನಿವಾರ ಸಂಜೆ ನಡೆದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣವನ್ನು ಆಲಿಸಲು ಜಮಾಯಿಸಿದ ಜನಸಾಗರವನ್ನು ಕಂಡು ಅರಗಿಸಲಾರದೆ ಕಾಂಗ್ರೆಸ್ ನವರು ಕೃತ್ಯ ನಡೆಸಿದ್ದಾರೆ. ಈ ಕೃತ್ಯ ಪೂರ್ವ ನಿಯೋಜಿತವಾಗಿದೆ ಎಂದರು. ಅದಕ್ಕೆ ಸಾಕ್ಷ್ಯ ಎಂಬಂತೆ ಘಟನೆ ನಡೆದ ಕೆಲವೇ ನಿಮಿಷದ ಬಳಿಕ ಕೃತ್ಯ ಎಸಗಿದ ಆರೋಪಿಗಳು ಬಗಂಬಿಲದಲ್ಲಿ ನಡೆದ ರೋಡ್ ಶೋನಲ್ಲಿ ಭಾಗವಹಿಸಿದ್ದಾರೆ ಎಂದರು.
ಕಾಂಗ್ರೆಸ್ನ ಕುಟಿಲ ಕೃತ್ಯವನ್ನು ಬಿಜೆಪಿ ಕಾರ್ಯಕರ್ತರು ಪ್ರಬಲವಾಗಿ ಖಂಡಿಸುತ್ತೇವೆ. ಮಹಿಳೆಯರ ಜಡೆ ಹಿಡಿದು ಎಳೆದಾಡುವಂತಹ ಕೃತ್ಯ ಎಸಗಿದ ಸಂಸ್ಕೃತಿ ತೀರ ಅಸಹನೀಯ. ಅದಕ್ಕೆ ಪ್ರತಿಯಾಗಿ ಸಾವಿರಾರು ಕಾರ್ಯಕರ್ತರು ಕೊಣಾಜೆ ಪೊಲೀಸ್ ಠಾಣೆಗೆ ಜಮಾಯಿಸಿ ಪ್ರತಿಭಟಿಸಿದ್ದಾರೆ. ಮದನಿನಗರ ಸೂಕ್ಷ್ಮ ಪ್ರದೇಶವಾಗಿದ್ದರೂ ಸೂಕ್ತ ಬಂದೋಬಸ್ತ್ ಇರದ ಹಿನ್ನೆಲೆಯಲ್ಲಿ ಘಟನೆ ಸಂಭವಿಸಿದೆ. ಆದರೂ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾದ ಹಿನ್ನೆಲೆಯಲ್ಲಿ ಸಂಭಾವ್ಯ ಅನಾಹುತ ತಪ್ಪಿದೆ ಎಂದರು.