ಮಂಗಳೂರು, ಎ15(SS): ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದ ಸಮರ್ಥ ನಾಯಕರನ್ನು ಮೂಲೆಗುಂಪು ಮಾಡಿದ್ದೇ ಮೋದಿ ಸಾಧನೆ ಎಂದು ಮಾಜಿ ಸಂಸದ, ಚಿತ್ರನಟ ಶತ್ರುಘ್ನ ಸಿನ್ಹಾ ಹೇಳಿದ್ದಾರೆ.
ಮುಡಿಪು ಬ್ಲಾಕ್ ಕಾಂಗ್ರೆಸ್ ಆಶ್ರಯದಲ್ಲಿ ನಡೆದ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ ಅವರು, ಮೋದಿ ಆಡಳಿತದಲ್ಲಿ ಜಾತ್ಯತೀತ ತತ್ವಪಾಲನೆ ಆಗುತ್ತಿಲ್ಲ. ಪ್ರಜಾಪ್ರಭುತ್ವದ ನೆಲೆಯಲ್ಲಿ ಸರ್ಕಾರ ನಡೆಯುತ್ತಿರಲಿಲ್ಲ. ಅವರು ಐದು ವರ್ಷಗಳಲ್ಲಿ ತನ್ನ ವೈಯಕ್ತಿಕ ವರ್ಚಸ್ಸು ವೃದ್ಧಿಸಲು 90 ಬಾರಿ ವಿದೇಶ ಪ್ರಯಾಣ ಮಾಡಿದ್ದಾರೆ. ಈ ಬಾರಿ ಚುನಾವಣಾ ಪ್ರಚಾರಕ್ಕಾಗಿ 10 ಸಾವಿರ ಕೋಟಿ ರೂ. ವ್ಯಯಿಸಿದ್ದಾರೆ ಎಂದು ಟೀಕಿಸಿದರು.
ನಾನು ಹಿಂದಿನಿಂದಲೂ ಕಾಂಗ್ರೆಸ್ಸಿಗ. ಹಲವು ಕಾರಣಗಳಿಂದ ಕಾಂಗ್ರೆಸ್ ಪಕ್ಷದಿಂದ ದೂರವಾಗಿದ್ದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಬದುಕಿದ್ದರೆ ನಾನು ಇಂದಿಗೂ ಕಾಂಗ್ರೆಸ್ಸಿನಲ್ಲೇ ಇರುತ್ತಿದ್ದೆ ಎಂದು ತಿಳಿಸಿದ್ದಾರೆ.
ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದ ಸಮರ್ಥ ನಾಯಕರನ್ನು ಮೂಲೆಗುಂಪು ಮಾಡಿದ್ದೇ ಮೋದಿ ಸಾಧನೆ. ಬಿಜೆಪಿಯಲ್ಲಿದ್ದ ವಾಜಪೇಯಿಯಂತಹ ಒಳ್ಳೆಯ ಸಮರ್ಥ ಆಡಳಿತಗಾರ ಸಾವನ್ನಪ್ಪಿದ್ದಾರೆ. ಅಡ್ವಾಣಿ, ಯಶವಂತ ಸಿನ್ಹ ಅವರಂತಹ ಧೀಮಂತ ನಾಯಕರ ಸ್ಥಿತಿ ನಿಮಗೆಲ್ಲರಿಗೂ ಗೊತ್ತಿದೆ. ಅಮಿತ್ ಷಾ ಮತ್ತು ಮೋದಿ ಟು ಮ್ಯಾನ್ ಆರ್ಮಿ ಆಗಿದ್ದರೆ, ಕೇಂದ್ರದಲ್ಲಿ ಮೋದಿ ಅವರದ್ದು ಒನ್ ಮ್ಯಾನ್ ಷೋ ಎಂದು ದೂರಿದರು.