ಸುಳ್ಯ, ಎ15(SS): ಕೇಸರಿ ಶಾಲು ಬಿಜೆಪಿಯವರ ಸೊತ್ತಲ್ಲ, ನಾನು ಅಪ್ಪಟ ಹಿಂದೂ ಸಂಸ್ಕೃತಿಯಲ್ಲಿ ಬೆಳೆದವನು ಎಂದು ದ.ಕ. ಲೋಕಸಭಾ ಕ್ಷೇತ್ರದ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಅಭ್ಯರ್ಥಿ ಮಿಥುನ್ ರೈ ಹೇಳಿದ್ದಾರೆ.
ಚುನಾವಣ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ನಾನು ಅಪ್ಪಟ ಹಿಂದೂ ಸಂಸ್ಕೃತಿಯಲ್ಲಿ ಬೆಳೆದವನು. ಬಿಜೆಪಿಯವರ ಕೋಮುವಾದಿ ಹಿಂದುತ್ವ ನಮ್ಮದಲ್ಲ. ಕೇಸರಿ ಶಾಲು ಬಿಜೆಪಿಯವರ ಸೊತ್ತಲ್ಲ. ನಾವು ಕೇಸರಿ ಧರಿಸಿದರೆ ಮುಸ್ಲಿಮರಿಗೆ, ಕ್ರೈಸ್ತರಿಗೆ ಹಾಗೂ ಹಿಂದೂ ಸಮುದಾಯಕ್ಕೆ ಸಮಸ್ಯೆ ಇಲ್ಲ. ಆದರೆ ನಮ್ಮ ಹೆಗಲ ಮೇಲೆ ಕೇಸರಿ ಕಂಡರೆ ಬಿಜೆಪಿ ಅಭ್ಯರ್ಥಿ ನಳಿನ್ಕುಮಾರ್ ಕಟೀಲು ಅವರಿಗೆ ಯಾಕೆ ಉರಿಯುತ್ತೆ ಎಂದು ಮಿಥುನ್ ರೈ ಪ್ರಶ್ನಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯ ಸಮಗ್ರ ಅಭಿವೃದ್ಧಿಯೇ ನನ್ನ ಗುರಿ. ಕಾಂಗ್ರೆಸ್ ಪಕ್ಷದ ಅಭಿವೃದ್ಧಿಪರ ಹಾಗೂ ಜಾತ್ಯತೀತ ನೆಲೆಗಟ್ಟಿನ ಸಂಸ್ಕಾರ ನಮಗೆ ಬಲುದೊಡ್ಡ ಶಕ್ತಿಯಾಗಿದೆ ಎಂದು ಹೇಳಿದರು.
ಒಂದು ವೇಳೆ ನಾನು ಗೆದ್ದರೆ ಕೋಡಿಂಬಾಳ ರೈಲ್ವೇ ನಿಲ್ದಾಣವನ್ನು ಮೇಲ್ದರ್ಜೆಗೇರಿಸಿ ಅಭಿವೃದ್ಧಿಪಡಿಸಲಾಗುವುದು. ಕಡಬ ತಾಲೂಕಿನ ಅಭಿವೃದ್ಧಿಗೆ ಒತ್ತು ನೀಡಲಾಗುವುದು. ತೀವ್ರವಾಗಿ ಕಾಡುತ್ತಿರುವ ವಿದ್ಯುತ್ ಸಮಸ್ಯೆಯನ್ನು ನೀಗಿಸುವುದರೊಂದಿಗೆ ಯುವ ಸಮುದಾಯಕ್ಕೆ ಹೆಚ್ಚಿನ ಉದ್ಯೋಗಾವಕಾಶ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದ್ದಾರೆ.
ಜಿಲ್ಲೆಯ ಶಾಂತಿಯನ್ನು ಕಾಪಾಡುವುದರೊಂದಿಗೆ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯಲು ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸಬೇಕಾಗಿದೆ. ಬಿಜೆಪಿಯವರು ಹಿಂದುತ್ವವನ್ನು ಮುಂದಿಟ್ಟು ಕೊಂಡು ಜನರ ಮಧ್ಯೆ ಬಿರುಕು ಹುಟ್ಟಿಸಿ ಜಾತಿ ರಾಜಕೀಯ ಮಾಡಿ ಓಟನ್ನು ವಿಭಜಿಸಿ ಗೆಲ್ಲುವ ತಂತ್ರ ಹೆಣೆದಿದ್ದಾರೆ. ಆದರೆ ಅದು ಈ ಬಾರಿ ಫಲ ನೀಡುವುದಿಲ್ಲ ಎಂದು ಕಿಡಿ ಕಾರಿದರು.