ಕಾರ್ಕಳ, ಏ 15 (MSP): ಲೋಕಾಸಭಾ ಚುನಾವಣೆಯ ಪ್ರಯುಕ್ತ ಮತದಾರರಿಗೆ ಧೈರ್ಯ ತುಂಬುವ ಹಾಗೂ ಮುಕ್ತ ಮತದಾನ ಮಾಡುವ ನಿಟ್ಟಿನಲ್ಲಿ ಈಗಾಗಲೇ ಜಿಲ್ಲೆಯ 11 ಕಡೆಗಳಲ್ಲಿ ಪಥಸಂಚಲನ ನಡೆಸಲಾಗಿದೆ. 2 ಐಟಿಬಿಪಿ (ಇಂಡೋ ಟಿಬೇಟಿನ್ ಬಾರ್ಡರ್ ಪೊಲೀಸ್) ಕಂಪೆನಿಗಳ ಮೂಲಕ 8 ಕಡೆ ಎಂಟು ಕಡೆಗಳಲ್ಲಿ ಪಥ ಸಂಚಾಲನ ನಡೆಸಲಾಗುತ್ತದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ಹೇಳಿದರು.
ಕಾರ್ಕಳ ನಗರದ ಅನಂತಶಯನ ದೇವಸ್ಥಾನದಿಂದ ಬಂಡೀಮಠ ಬಸ್ ನಿಲ್ದಾಣದ ವರೆಗೆ ಆಯೋಜಿಸಿ ಪಥಸಂಚಲನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಐಟಿಬಿಪಿ 80 ಮಂದಿಯ ಎರಡು ತಂಡ, ಕೆಎಸ್ಆರ್ಪಿ ಸಿಬ್ಬಂದಿಗಳು ಪಥಸಂಚಲನದಲ್ಲಿ ಪಾಲ್ಗೊಂಡರು.
ಕಾರ್ಕಳ ತಾಲೂಕು ಚುನಾವಣಾಧಿಕಾರಿ ಸಂತೋಷ್.ಜಿ. ತಹಶೀಲ್ದಾರ್ ಪುರಂದರ್ ಹೆಗ್ಡೆ,ಹೆಬ್ರಿ ತಹಶೀಲ್ದಾರ್ ಮಹೇಶ್, ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಮೇಜರ್ ಡಾ.ಹರ್ಷ, ಎಎಸ್ಪಿ ಕೃಷ್ಣಕಾಂತ್, ಐಟಿಬಿಪಿ ತಂಡದ ಉಪ ದಂಡಾಧಿಕಾರಿ ಕುಲ್ವನ್ ಸಿಂಗ್, ಪೊಲೀಸ್ ವೃತ್ತ ನಿರೀಕ್ಷಕ ಹಾಲ್ ಮೂರ್ತಿ, ನಗರ ಠಾಣಾಧಿಕಾರಿ ನಂಜಾನಾಯಕ್, ಗ್ರಾಮಾಂತರ ಠಾಣಾಧಿಕಾರಿ ನಝೀರ್ ಹುಸೈನ್, ಹೆಬ್ರಿ ಠಾಣಧಿಕಾರಿ ಸತೀಶ್, ಅಜೆಕಾರು ಠಾಣಾಧಿಕಾರಿ ಪವಸ್ಕರ್ ಮೊದಲಾದವರು ಪಾಲ್ಗೊಂಡರು.