ಕುಂದಾಪುರ, ಏ 15 (MSP): ಹಿಂದೆ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಯುದ್ಧಗಳು ನಡೆದಿದ್ದವು. ಆದರೆ ಆಗ ಅದನ್ನು ರಾಜಕೀಯಗೊಳಿಸಿಕೊಳ್ಳದೇ ಯೋಧರನ್ನು ಗೌರವಿಸುವ ಕಾರ್ಯವಷ್ಟೆ ನಡೆದಿತ್ತು. ಆದರೆ ಈಗ ಬಿಜೆಪಿ ಯೋಧರನ್ನು ಮುಂದಿಟ್ಟುಕೊಂಡು ಜನರನ್ನು ತಪ್ಪುದಾರಿಗೆಳೆಯುವ ಕಾರ್ಯ ಮಾಡುತ್ತಿದೆ. ಸೈನಿಕರನ್ನು ನಾವು ಗೌರವಿಸಬೇಕು. ಆದರೆ ಅದನ್ನು ರಾಜಕೀಯಕ್ಕೆ ಬಳಸಿಕೊಳ್ಳಬಾರದು ಎಂದು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದ್ದಾರೆ.
ಅವರು ಏ.೧೫ರಂದು ಕುಂದಾಪುರದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಹಿಂದುತ್ವ, ರಾಮಮಂದಿರ ಈ ರೀತಿ ಬೇರೆ ಬೇರೆ ವಿಷಯಗಳನ್ನು ಇಟ್ಟುಕೊಂಡು ಚುನಾವಣೆ ಎದುರಿಸುತ್ತಿದೆ. ಅಭಿವೃದ್ದಿಯ ವಿಚಾರದಲ್ಲಿ ಅವರು ಮತ ಕೇಳುತ್ತಿಲ್ಲ. ಕರಾವಳಿ ಭಾಗದಲ್ಲಿನ ಮೀನುಗಾರರು, ಹಿಂದುಳಿದ ವರ್ಗದವರ ಸಮಸ್ಯೆಯನ್ನು ಕೇಂದ್ರ ಸರ್ಕಾರಕ್ಕೆ ಪರಿಹಾರ ಮಾಡಲು ಆಗಲಿಲ್ಲ. ನಾಪತ್ತೆಯಾಗಿರುವ ಮೀನುಗಾರರ ಪತ್ತೆ ಮಾಡುವ ಕಾರ್ಯವಾಗಲಿ, ಮೀನುಗಾರರನ್ನು ಎಸ್.ಟಿ ಗೆ ಸೇರಿಸುವ ಬೇಡಿಕೆಯಾಗಲಿ ಇನ್ನೂ ಈಡೇರಿಲ್ಲ. ಇದನ್ನೆಲ್ಲಾ ಗಮನಿಸಿ ಈ ಭಾಗದ ಸಮಸ್ಯೆಗೆ ಸ್ಪಂದಿಸುವ ರಾಜಕೀಯ ಹಿನ್ನೆಲೆ ಇರುವ, ಮೀನುಗಾರ ಮುಖಂಡ ಪ್ರಮೋದ್ ಮದ್ವರಾಜ್ ಅವರನ್ನು ಚುನಾಯಿಸಬೇಕಾಗಿದೆ ಎಂದರು.
ಉಡುಪಿ ಹಾಗೂ ಶಿವಮೊಗ್ಗ ಕ್ಷೇತ್ರದಲ್ಲಿ ಕಾಂಗ್ರೆಸ್-ಜೆಡಿಎಸ್ ಜಂಟಿಯಾಗಿ ಚುನಾವಣೆ ಎದುರಿಸುತ್ತಿದೆ. ಉಡುಪಿ ಕ್ಷೇತ್ರದಲ್ಲಿ ಪ್ರಮೋದ್ ಮದ್ವರಾಜ್ ಅವರಿಗೂ, ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮಧು ಬಂಗಾರಪ್ಪ ಅವರ ತೆನೆ ಹೊತ್ತ ಮಹಿಳೆಯ ಗುರುತಿಗೆ ಮತ ನೀಡುವ ಮೂಲಕ ಸಮರ್ಥ ಅಭ್ಯರ್ಥಿಗಳನ್ನು ಗೆಲ್ಲಿಸುವ ಕೆಲಸ ಈ ಭಾಗದ ಜನರು ಮಾಡಬೇಕಾಗಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮೂರು ಬಾರಿ ಸತತ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದರು. ಆದರೆ ಕೆಲಸ ಏನೂ ಆಗಿಲ್ಲ. ಇದು ಜನರ ಗಮನಕ್ಕೆ ಬಂದಿದೆ. ಹಾಗಾಗಿ ಈ ಬಾರಿ ಜನರು ಬದಲಾವಣೆ ಮಾಡಲಿದ್ದಾರೆ. ಈಗಾಗಲೇ ಕ್ಷೇತ್ರದಲ್ಲಿ ಜಂಟಿ ಚುನಾವಣಾ ಪ್ರಚಾರ ವೇಗವಾಗಿ ನಡೆಯುತ್ತಿದೆ. ಬಿಜೆಪಿಯ ಯಾವುದೇ ಸಂದೇಶಗಳಿಗೂ ಜನ ಕಿವಿಗೊಡದೆ ಮೈತ್ರಿಕೂಟವನ್ನು ಬೆಂಬಲಿಸಲಿದ್ದಾರೆ. ಭದ್ರವತಿ, ತೀರ್ಥಹಳ್ಳಿಯಲ್ಲಿ ಡಿಕೆಶಿ ಅವರು ಚುನಾವಣಾ ಉಸ್ತುವಾರಿ ತಗೆದುಕೊಂಡಿದ್ದಾರೆ. ಬೈಂದೂರಿನಲ್ಲಿ ನಾನು ಉಸ್ತುವಾರಿ ತಗೆದುಕೊಂಡಿದ್ದೇನೆ. ಹೊಸ ರೀತಿಯಲ್ಲಿ ಚುನಾವಣಾ ತಂತ್ರಗಾರಿಕೆಯನ್ನು ಹೆಣೆದು ಕೆಲಸ ಮಾಡಲಿದ್ದೇವೆ ಎಂದರು.
ನಾನು ಶಾಸಕನಾಗಿದ್ದ ಸಂದರ್ಭ ಹಿಂದುಳಿದವರು, ಮೀನುಗಾರರ ಅಭಿವೃದ್ದಿಗೆ ಸಾಕಷ್ಟು ಅನುದಾನಗಳನ್ನು ಕೊಡಿಸಿದ್ದೇನೆ. ಸಮುದಾಯ ಭವನಗಳ ನಿರ್ಮಾಣಕ್ಕೆ ಸಹಕರಿಸಿದ್ದೇನೆ. ಕಳೆದ ಚುನಾವಣೆಯಲ್ಲಿ ಸೋತರೂ ಕ್ಷೇತ್ರದಲ್ಲಿಯೇ ಇದ್ದೇನೆ. ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರ ಮೂಲಕ ಕ್ಷೇತ್ರಕ್ಕೆ ೧೦ ಕೋಟಿ ಅನುದಾನ ತಂದಿದ್ದೇನೆ ಎಂದರು.