ಮಂಗಳೂರು, ನ 13: ಅಕ್ರಮ ಸಕ್ರಮ ನಿಯಮ ಉಲ್ಲಂಘಿಸಿ ಪತ್ನಿ ಹೆಸರಿನಲ್ಲಿ ಸರ್ಕಾರಿ ಜಮೀನು ಪಡೆದುಕೊಂಡಿದ್ದಾರೆ ಎಂಬ ಆರೋಪವನ್ನು ದ.ಕ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ನಿರಾಕರಿಸಿದ್ದಾರೆ. ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಸಂಬಂಧಪಟ್ಟ ದಾಖಲೆಗಳನ್ನು ಬಿಡುಗಡೆಗೊಳಿಸಿ ನ 13 ರ ಸೋಮವಾರ ಮಾತನಾಡಿದ ಅವರು ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ ನನ್ನ ವಿರುದ್ದ ಸುಳ್ಳು ಆರೋಪ ಮಾಡಿದ್ದು ಇದೆಲ್ಲವೂ ಆಧಾರ ರಹಿತ ಎಂದರು.
ನಮ್ಮದು ಗೌರವಾನ್ವಿತ ಕುಟುಂಬವಾಗಿದ್ದು ಹಿರಿಯ ತಲೆಮಾರಿನವರು ಸಾವಿರಾರು ಎಕರೆ ಆಸ್ತಿ ಒಡೆಯರಾಗಿದ್ದರು. 1961 ರಲ್ಲಿ ಕಳ್ಳಿಗೆಯಲ್ಲಿ ತಂದೆ ನೂರಾರು ಎಕರೆ ಜಮೀನು ಖರೀದಿಸಿದ್ದರು. ಆದರೆ ಭೂ ಸುಧಾರಣೆ ಕಾಯ್ದೆಯಡಿಯಲ್ಲಿ ಭೂಮಿ ಬಿಟ್ಟು ಕೊಟ್ಟಿದ್ದುಉಳಿದ ಜಮೀನಿನಲ್ಲಿ 5 ಮಕ್ಕಳು ವಿಭಾಗ ಪತ್ರ ಮಾಡಿಸಿದ್ದೇವೆ. ಆದರೆ ಕುಟುಂಬದ ಸದಸ್ಯರ ಆಸ್ತಿಯನ್ನು ಕ್ರಯಪತ್ರದ ಮೂಲಕ ನಾನು ಖರೀದಿಸಿದ್ದು ನನ್ನಲ್ಲಿರುವುದು ಕೇವಲ 15.22 ಎಕರೆ ಆಸ್ತಿ ಎಂದು ಸ್ಪಷ್ಟಪಡಿಸಿದರು. ನನಗಿರುವ ಅಧಿಕಾರ ಬಳಸಿ ಎಷ್ಟೋ ಆಸ್ತಿ ಮಾಡಬಹುದಿತ್ತು ಆದರೆ ಅಧಿಕಾರ ದುರುಪಯೋಗ ಯಾವತ್ತು ಮಾಡಿಲ್ಲ, ಇನ್ನುಮಂಗಳೂರು ಹಾಗೂ ಬೆಂಗಳೂರಿನಲ್ಲಿ ನನಗೆ ಯಾವ ಸ್ವಂತ ಮನೆಯೂ ಇಲ್ಲ. ಇನ್ನು ಪತ್ನಿಯ ಕುಟುಂಬದ ಆಸ್ತಿ ಅವರ ಕುಟುಂಬದ ಜಂಟಿ ಖಾತೆಯಲ್ಲಿದೆ. ಇದಕ್ಕೆ ಸಂಬಂದಪಟ್ಟ 3 ಎಕರೆ ಕುಮ್ಕಿ ಜಮೀನು ಪತ್ನಿ ಹೆಸರಿಗೆ ಮಂಜೂರಾಗಿದ್ದು ಸದ್ರಿ ಇದರ ವಿರುದ್ದ ಅವರ ಸಹೋದರ ಎ.ಸಿ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದು ಅದರ ಅಂತಿಮ ತೀರ್ಪು ಇನ್ನು ಬಂದಿರುವುದಿಲ್ಲ ಎಂದು ಹರಿಕೃಷ್ಣ ಬಂಟ್ವಾಳ ಮಾಡಿದ ಆರೋಪಕ್ಕೆ ತಿರುಗೇಟು ನೀಡಿದರು.