ಮಂಗಳೂರು, ಏ 15(SM): ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಈ ಬಾರಿಯೂ ಕರಾವಳಿ ವಿದ್ಯಾರ್ಥಿಗಳು ಸಾಧನೆ ಮೆರೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಮೊದಲ ನಾಲ್ಕು ರ್ಯಾಂಕ್ ಗಳು ಕರಾವಳಿ ಪಾಲಾಗಿವೆ. ಮೊದಲ ರ್ಯಾಂಕ್ ನ್ನು ಇಬ್ಬರು ಹಂಚಿಕೊಂಡಿದ್ದರೆ, ಎರಡನೇ ಹಾಗೂ ಮೂರನೇ ರ್ಯಾಂಕ್ ಕೂಡ ದಕ್ಷಿಣ ಕನ್ನಡ ಜಿಲ್ಲೆಯ ವುದ್ಯಾರ್ಥಿಗಳು ಪಡೆದುಕೊಂಡಿದ್ದಾರೆ.
ವಿಟ್ಲ ಸಮೀಪದ ಅಳಿಕೆ ಶ್ರೀ ಸತ್ಯಸಾಯಿ ವಿದ್ಯಾಕೇಂದ್ರದ ವಾಣಿಜ್ಯ ವಿಭಾಗದ ವಿದ್ಯಾರ್ಥಿ, ಕೃಷಿಕ ಕುಟುಂಬದಿಂದ ಬಂದಿರುವ ಶ್ರೀಕೃಷ್ಣ ಶರ್ಮ ಪಿಯುಸಿ ಪರೀಕ್ಷೆಯಲ್ಲಿ 596 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ ಹೆಸರು ತಂದಿದ್ದಾರೆ. ಇನ್ನು ವಾಣಿಜ್ಯ ವಿಭಾಗದಲ್ಲೇ ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಒಲ್ವಿಟ ಅನ್ಸಿಲಾ ಡಿಸೋಜ ಕೂಡ 596 ಅಂಕಗಳನ್ನು ಪಡೆಯುವ ಮೂಲಕ ಮೊದಲ ರ್ಯಾಂಕ್ ಪಡೆದು ದ.ಕ. ಜಿಲ್ಲೆಯ ಹೆಸರನ್ನು ರಾಜ್ಯದೆಲ್ಲೆಡೆ ವ್ಯಾಪಿಸುವಂಟೆ ಮಾಡಿದ್ದಾರೆ.
ಇನ್ನು ಇದೇ ವಿಭಾಗದಲ್ಲಿ ಮಂಗಳೂರಿನ ಕೆನರಾ ಪಿಯು ಕಾಲೇಜಿನ ವಿದ್ಯಾರ್ಥಿನಿ ಶ್ರೀಯಾ ಶೆಣೈ 595 ಅಂಕಗಳನ್ನು ಗಳಿಸುವ ಮೂಲಕ ರಾಜ್ಯಕ್ಕೆ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಈಕೆ ಮಂಗಳೂರಿನ ಬಿಕರ್ನಕಟ್ಟೆಯ ಶಾಲಿನಿ ಶೆಣೈ-ಗಣೇಶ್ ಶೆಣೈ ದಂಪತಿಯ ಪುತ್ರಿಯಾಗಿದ್ದಾರೆ.
ಇನ್ನು ವಾಣಿಜ್ಯ ವಿಭಾಗದಲ್ಲಿ ಪುತ್ತೂರು ಸಂತ ಫಿಲೋಮಿನಾ ಕಾಲೇಜು ವಿದ್ಯಾರ್ಥಿ ಸ್ವಸ್ತಿಕ್ 594 ಅಂಕಗಳನ್ನು ಗಳಿಸುವ ಮೂಲಕ ರಾಜ್ಯಕ್ಕೆ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಇನ್ನು ವಿಜ್ಞಾನ ವಿಭಾಗದಲ್ಲಿ ಉಡುಪಿ ಜಿಲ್ಲೆಯ ಸ್ವಾತಿ ರಾಜ್ಯಕ್ಕೆ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಉಡುಪಿಯ ಎಂಜಿಎಂ ಕಾಲೇಜು ವಿದ್ಯಾರ್ಥಿನಿಯಾಗಿರುವ ಸ್ವಾತಿ 592 ಅಂಕ ಪಡೆದುಕೊಂಡು ಈ ಸಾಧನೆಯನ್ನು ಮಾಡಿದ್ದಾರೆ.
ಒಟ್ಟಿನಲ್ಲಿ ಕರಾವಳಿಯಲ್ಲಿ ರ್ಯಾಂಕ್ ಪಡೆದು ಸಾಧನೆ ಮಾಡಿದ ವಿದ್ಯಾರ್ಥಿಗಳೆಲ್ಲ, ಗ್ರಾಮೀಣ ಭಾಗದವರಾಗಿದ್ದು, ರಾಜ್ಯದೆಲ್ಲೆಡೆ ಕರಾವಳಿ ಕೀರ್ತಿಯನ್ನು ಹಬ್ಬಿಸುವಂತೆ ಮಾಡಿದ್ದಾರೆ.