ಮಂಗಳೂರು, ಏ 15(SM): ಏಪ್ರಿಲ್ 14ರ ರಾತ್ರಿ ಬಜಪೆಯ ಕರಂಬಾರು ಎಂಬಲ್ಲಿ ಮನೆಯ ಮೇಲಿಂದ ಬಿದ್ದು ಗಂಭೀರ ಗಾಯಗೊಂಡಿದ್ದ ಗ್ರಾಮ ಪಂಚಾಯತ್ ಸದಸ್ಯರ ಪುತ್ರ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ. ಬಜಪೆ ಸಮೀಪದ ಮಳವೂರ್ ಗ್ರಾಮ ಪಂಚಾಯತ್ ಸದಸ್ಯ ಲಕ್ಷ್ಮಣ್ ರವರ ಸುಪುತ್ರ ದೀಕ್ಷಿತ್ ರಾಜ್ ಮೃತ ಯುವಕ.
ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ದೀಕ್ಷಿತ್ ರಾಜ್ ಚಿಕಿತ್ಸೆಗೆ ಸ್ಪಂಧಿಸದೆ ನಿಧನ ಹೊಂದಿದ್ದಾರೆ.
ಕರಂಬಾರ್ ನಲ್ಲಿ ದೀಕ್ಷಿತ್ ರಾಜ್ ಕುಟುಂಬ ನೂತನ ಮನೆ ನಿರ್ಮಾಣ ಕಾರ್ಯ ನಡೆಸುತ್ತಿದ್ದರು. ನಿನ್ನೆ ರಾತ್ರಿ ಸಮಯದಲ್ಲಿ ದೀಕ್ಷಿತ್ ರಾಜ್ ನೂತನವಾಗಿ ನಿರ್ಮಾಣವಾಗುತ್ತಿದ್ದ ಮನೆಯ ಮಹಡಿಯ ಮೇಲೇರಿದ್ದಾರೆ. ಮಹಡಿಯ ಮೇಲಿನ ಸ್ಲ್ಯಾಬ್ ಗೆ ನೀರು ಹಾಕಲಾಗಿದ್ದು, ಈ ಸಂದರ್ಭ ಅವರು ಮಹಡಿಯಿಂದ ಜಾರಿ ಕೆಳಕ್ಕೆ ಬಿದ್ದಿದ್ದಾರೆ. ತಕ್ಷಣ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ, ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಇನ್ನು ಆಸ್ಪತ್ರೆಗೆ ಶಾಸಕರಾದ ಉಮಾನಾಥ್ ಕೋಟ್ಯಾನ್, ದ. ಕ. ಲೋಕಸಭಾ ಕ್ಷೇತ್ರದ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್, ಜಿಲ್ಲಾ ಉಪಾಧ್ಯಕ್ಷರಾದ ರವಿಶಂಕರ್ ಮಿಜಾರ್ ಮೊದಲಾದವರು ಭೇಟಿ ನೀಡಿದ್ದು, ಕುಟುಂಬ ಸದಸ್ಯರಿಗೆ ಸಾಂತ್ವಾನ ಹೇಳಿದ್ದಾರೆ.