ಮಂಗಳೂರು, ಎ16(Daijiworld News/SS): ಮೋದಿಯವರ ಹೆಸರಿನಲ್ಲಿ ಮತ ಯಾಚನೆ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಸ್ಪಷ್ಟಪಡಿಸಿದ್ದಾರೆ.
ಚುನಾವಣಾ ಪ್ರಚಾರದ ವೇಳೆ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಭಾರತವನ್ನು ವಿಶ್ವದಲ್ಲೇ ತಲೆ ಎತ್ತಿ ನಿಲ್ಲುವಂತೆ ಮಾಡಿದ ನಾಯಕ. ಕಳೆದ 5 ವರ್ಷಗಳಲ್ಲಿ ಮಾಡಿರುವ ಸುಧಾರಣೆಗಳನ್ನು ಕಾಂಗ್ರೆಸಿಗರೇ ಮೆಚ್ಚುತ್ತಿದ್ದಾರೆ. ಭಾರತವನ್ನು ಮತ್ತಷ್ಟು ಪ್ರಗತಿಪಥದಲ್ಲಿ ಕೊಂಡೊಯ್ಯಲು ಅವರಂತಹ ನಾಯಕರು ಮತ್ತೆ ಪ್ರಧಾನಿ ಯಾಗಬೇಕೆಂಬುದು ಎಲ್ಲ ಭಾರತೀಯರ ಆಶಯ. ಹೀಗಾಗಿ ಅವರ ಹೆಸರಿನಲ್ಲಿ ಮತ ಯಾಚನೆ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಗೌರವವನ್ನು ಎತ್ತಿ ಹಿಡಿದಿದ್ದಾರೆ. ಅದನ್ನು ಜನರ ಮುಂದಿಡುತ್ತಿದ್ದೇವೆ. ನಮ್ಮ ನಾಯಕರ ಹೆಸರನ್ನು ಹೇಳಿ ಮತ ಕೇಳುವುದು ಅಪರಾಧ ಅಲ್ಲ ಎಂದು ಹೇಳಿದರು.
ಕಳೆದ ಐದು ವರ್ಷಗಳಲ್ಲಿ ಸಂಸದನಾಗಿ ಕೇಂದ್ರದಿಂದ ದ.ಕ. ಜಿಲ್ಲೆಗೆ ಒಟ್ಟು 16,505 ಕೋ.ರೂ. ಅನುದಾನ ತಂದಿದ್ದು, ಅದರ ಆಧಾರದಲ್ಲೇ ಈ ಬಾರಿಯೂ ಒಂದು ಅವಕಾಶ ನೀಡುವಂತೆ ಜನರಲ್ಲಿ ಮತ ಯಾಚಿಸುತ್ತಿದ್ದೇನೆ. ಕಾಂಗ್ರೆಸ್ ಪಕ್ಷದ ರಾಜ್ಯ ನಾಯಕರು, ಮಂತ್ರಿಗಳು ಅವರು ಜಿಲ್ಲೆಗೆ ನೀಡಿದ ಕೊಡುಗೆ ಏನು ಎನ್ನುವುದನ್ನು ಮೊದಲು ಜನರ ಮುಂದಿಡಲಿ. ಕೇವಲ ಬಾಯಿಚಪಲಕ್ಕೆ ಮಾತನಾಡುವುದನ್ನು ಬಿಟ್ಟು ಅಂಕಿ- ಅಂಶಗಳನ್ನು ಬಹಿರಂಗಪಡಿಸಿದರೆ ಉತ್ತಮ ಎಂದು ಹೇಳಿದರು.