ಉಡುಪಿ, ಏ 16(MSP): ಉಡುಪಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಅವರ ಮಾವ ಪತಿ ಐಪಿಎಸ್ ಅಧಿಕಾರಿ ಉಜ್ವಲ್ಕುಮಾರ್ ಘೋಷ್ ಅವರ ತಂದೆ ವಿಧಿವಶರಾಗಿದ್ದು, ನೋವಿನಲ್ಲೂ ಕರ್ತವ್ಯಪ್ರಜ್ಞೆ ಮೆರೆದು ಜಿಲ್ಲಾಧಿಕಾರಿ ಎಲ್ಲರಿಗೂ ಮಾದರಿಯಾಗಿದ್ದಾರೆ.
ಮಾವ, ನಿವೃತ್ತ ಪ್ರಾಧ್ಯಾಪಕ ಗಿರೀಶ್ಚಂದ್ರ ಘೋಷ್ ಬೆಂಗಳೂರಿನಲ್ಲಿ ಮಾ.30 ಶನಿವಾರದಂದು ನಿಧನರಾಗಿದ್ದರು. ಭಾನುವಾರ ರಜೆ ಹಿನ್ನೆಲೆಯಲ್ಲಿ ಉನ್ನತ ಅಧಿಕಾರಿಗಳಿಂದ ಅನುಮತಿ ಪಡೆದ ಹೆಪ್ಸಿಬಾ, ಬೆಂಗಳೂರಿಗೆ ತೆರಳಿ, ಪತಿಯೊಂದಿಗೆ ಮಾವನ ಪಾರ್ಥಿವ ಶರೀರವನ್ನು ಕೋಲ್ಕತಾಗೆ ಕೊಂಡೊಯ್ದು, ಕುಟುಂಬಕ್ಕೆ ಒಪ್ಪಿಸಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಸೋಮವಾರ ಕರ್ತವ್ಯಕ್ಕೆ ಮರಳಿದ್ದರು.
ಚುನಾವಣೆಯ ಕರ್ತವ್ಯದಲ್ಲಿರುವ ಅವರು ಇದೀಗ ಮಾವನ ಉತ್ತರ ಕ್ರಿಯೆಯಲ್ಲೂ ಭಾಗವಹಿಸದೆ, ಉಡುಪಿಯಲ್ಲೇ ಪ್ರಾರ್ಥನೆ ಸಲ್ಲಿಸಿ, ಸರ್ಕಾರಿ ಕೆಲಸದ ಮೂಲಕವೇ ಶ್ರದ್ಧಾಂಜಲಿ ಅರ್ಪಿಸುವ ಮೂಲಕ ಉಡುಪಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಮಾದರಿಯಾಗಿದ್ದಾರೆ.
ತಾವು ಮೈಗೂಡಿಸಿಕೊಂಡಿರುವ ಈ ಬದ್ಧತೆಗೆ ಪತಿ ಉಜ್ವಲ್ ಅವರೇ ಪ್ರೇರಣೆ ಎನ್ನುತ್ತಾರೆ ಹೆಪ್ಸಿಬಾ. ತಮ್ಮ ವಿವಾಹಕ್ಕೆ ಕೂಡ ಒಂದೇ ದಿನ ರಜೆ ಮಾಡಿ, ಮಾರನೇ ದಿನ ಅವರು ಕರ್ತವ್ಯಕ್ಕೆ ಹಾಜರಾಗಿ ಅಚ್ಚರಿ ಮೂಡಿಸಿದ್ದರು.