ಮಂಗಳೂರು, ಎ16(Daijiworld News/SS): ದಕ್ಷಿಣ ಕನ್ನಡಕ್ಕೆ ಜೀವನದಿಯಾಗಿರುವ ನೇತ್ರಾವತಿ ತನ್ನ ಹರಿವನ್ನು ನಿಲ್ಲಿಸಿದ್ದಾಳೆ. ಒಡಲನ್ನು ಸ್ವಲ್ಪ ಸ್ವಲ್ಪವೇ ಬರಿದು ಮಾಡಿಕೊಂಡು ರಣ ಬಿಸಿಲಿಗೆ ಮೈ ಒಡ್ಡಿದ್ದಾಳೆ. ನೇತ್ರಾವತಿಯು ದಿನೇ ದಿನೆ ಬತ್ತುತ್ತಿದ್ದು, ಇದೀಗ ಜನರಲ್ಲಿ ಆತಂಕ ಮನೆ ಮಾಡಿದೆ.
ಈ ಬಾರಿ ನೇತ್ರಾವತಿ ನದಿ ಉಪ್ಪಿನಂಗಡಿಯಲ್ಲಿ ಕುಮಾರಧಾರಾ ನದಿ ಸಂಗಮಿಸುವ ಸ್ಥಳಕ್ಕೆ 150 ಮೀಟರ್ ಅಂತರ ಇರುವಾಗಲೇ ಹರಿವು ನಿಲ್ಲಿಸಿದೆ. ನೇತ್ರಾವತಿ, ಕುಮಾರಾಧಾರಾ, ಫಲ್ಗುಣಿ ನದಿಗಳಿದ್ದರೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೀರಿನ ಕೊರತೆ ಎದುರಾಗಿದೆ. ಜಿಲ್ಲೆಯ ಪ್ರಮುಖ ನದಿಗಳಾದ ನೇತ್ರಾವತಿ, ಕುಮಾರಧಾರಾ ಹಾಗೂ ಪಯಸ್ವಿನಿಯಲ್ಲಿ ನೀರಿನ ಮಟ್ಟ ಭಾರೀ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ಇದರಿಂದ ಕೃಷಿ ಮತ್ತು ದಿನ ಬಳಕೆಗೆ ನೀರಿನ ಅಭಾವ ಕಾಡುವ ಭೀತಿ ಉಂಟಾಗಿದೆ.
ಜಿಲ್ಲೆಯಲ್ಲಿರುವ ನದಿಗಳು ಬತ್ತಿ ಹೋಗಿವೆ. ಅಂತರ್ಜಲದ ಮಟ್ಟವೂ ಕಡಿಮೆಯಾಗಿದೆ. ಪರಿಣಾಮ, ಈ ಭಾಗದ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಬಂಟ್ವಾಳ ತಾಲೂಕಿನಲ್ಲಿ ಎಕರೆಗಟ್ಟಲೆ ಜಮೀನಿನಲ್ಲಿ ಮಾಡಿದ್ದ ಅನೇಕ ಮಂದಿಯ ಅಡಿಕೆ ತೋಟ ನೀರಿಲ್ಲದೇ ಒಣಗಿಹೋಗಿದೆ. ಈ ಭಾಗದ ಅನೇಕ ರೈತರು ನೀರಿಲ್ಲದೇ ವ್ಯವಸಾಯ ಮಾಡುವುದನ್ನೇ ಬಿಟ್ಟಿದ್ದಾರೆ. ಕೇವಲ ಅಡಿಕೆ ಮಾತ್ರವಲ್ಲ ನೀರಿಲ್ಲದೇ ಭತ್ತದ ಬೆಳೆಯೂ ಕೂಡ ನಾಶವಾಗಿದೆ. ಜೊತೆಗೆ ತೆಂಗಿನಮರಗಳು ಒಣಗಿ ನಿಂತಿವೆ.
ಕಳೆದ ಆಗಸ್ಟ್, ಸೆಪ್ಟಂಬರ್ನಲ್ಲಿ ಸುರಿದ ಮಳೆ, ಪ್ರಾಕೃತಿಕ ವಿಕೋಪದಿಂದ ಉಕ್ಕೇರಿದ್ದ ಕುಮಾರಧಾರಾ, ಪಯಸ್ವಿನಿ ನದಿಗಳಲ್ಲಿ ನೀರಿನ ಮಟ್ಟ ಗಣನೀಯ ಪ್ರಮಾಣದಲ್ಲಿ ಕುಸಿದಿದೆ. ಕಳೆದ ಮಳೆಗಾಲದಲ್ಲಿ 30 ವರ್ಷಗಳಲ್ಲೇ ಗರಿಷ್ಠ ನೀರಿನ ಹರಿವು ಕಂಡಿದ್ದ ಈ ನದಿಗಳಲ್ಲಿ ಈಗ ಜಲಚರಗಳು ನೀರಿಗಾಗಿ ಹಾಹಾಕಾರ ಪಡುವ ದಿನಗಳು ಸನ್ನಿಹಿತವಾಗಿವೆ.
ಕಳೆದ ಬಾರಿ ಸುರಿದ ಮಹಾಮಳೆಗೆ ನೇತ್ರವಾತಿ ಕುಮಾರಧಾರ ಸಂಗಮ ಕ್ಷೇತ್ರವಾದ ಉಪ್ಪಿನಂಗಡಿಯಲ್ಲಿ ನೇತ್ರಾವತಿ ಮೈದುಂಬಿ ಹರಿದಿದ್ದಳು. ಇದರಿಂದ ಹಲವೆಡೆ ನೆರೆ ಪರಿಸ್ಥಿತಿಯೂ ನಿರ್ಮಾಣವಾಗಿತ್ತು. ಮಹಾಮಳೆಯ ನಂತರ ಉಪ್ಪಿನಂಗಡಿಯಲ್ಲಿ ಮೈದುಂಬಿ ಹರಿಯುತ್ತಿದ್ದ ನೇತ್ರಾವತಿ ಇತ್ತೀಚೆಗೆ ದಿನದಿಂದ ದಿನಕ್ಕೆ ಬತ್ತುತ್ತಿರುವ ವಿದ್ಯಮಾನ ನಡೆಯುತ್ತಿದೆ. ಈ ವಿದ್ಯಮಾನ ಆತಂಕಕ್ಕೆ ಕಾರಣವಾಗಿದೆ. ನೇತ್ರಾವತಿ ನದಿ ಈ ರೀತಿ ಬತ್ತುತ್ತಿರುವುದನ್ನು ಯಾರೂ ನಿರೀಕ್ಷಿಸಿರಲಿಲ್ಲ. ಕೇವಲ ನದಿ ಮಾತ್ರವಲ್ಲ, ಜಿಲ್ಲೆಯ ಹಲವು ಬಾವಿಗಳಲ್ಲಿಯೂ ನೀರು ಇಂಗುತ್ತಿದೆ.