ಮಂಗಳೂರು, ಏ 16(Daijiworld News/MSP): ಕರ್ನಾಟಕದಲ್ಲಿ ಮೊದಲ ಹಂತದ ಹಾಗೂ ದೇಶದಲ್ಲಿ ಎರಡನೇ ಹಂತದಲ್ಲಿ ನಡೆಯುವ ಲೋಕಸಭಾ ಚುನಾವಣೆ ಸುಸೂತ್ರವಾಗಿ ನಡೆಯಲೆಂದು ದ.ಕ. ಜಿಲ್ಲೆಯಲ್ಲಿ ಇಂದಿನಿಂದ ಏ.19 ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಏ.16 ರ ಮಂಗಳವಾರ ಹೇಳಿದ್ದಾರೆ.
ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿ, ಏ.16 ರ ಸಂಜೆ 6 ಗಂಟೆಯಿಂದ ಏಪ್ರಿಲ್ 19 ರ ಸಂಜೆ 6 ಗಂಟೆ ತನಕ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಮಾತ್ರವಲ್ಲದೆ ಏಪ್ರಿಲ್ 16 ರ ಸಂಜೆ 6 ಗಂಟೆಯಿಂದ ಏಪ್ರಿಲ್ 18 ಮಧ್ಯರಾತ್ರಿ 12 ಗಂಟೆಯವರೆಗೆ ಮದ್ಯಮಾರಾಟ ನಿಷೇಧ ಜಾರಿಗೊಳಿಸಲಾಗಿದೆ ಎಂದರು.
ಇವಿಎಂ ಬಗ್ಗೆ ಗೊಂದಲ ಯಾವುದೇ ಬೇಡ. ಒಂದು ವೇಳೆ ಯಾವುದಾದರೂ ಮತಗಟ್ಟೆಯಲ್ಲಿ ಇವಿಎಂ ಕಾರ್ಯನಿರ್ವಹಿಸದಿದ್ದರೆ ಅದನ್ನು ತಕ್ಷಣ ಬದಲಾಯಿಸುವ ವ್ಯವಸ್ಥೆ ಮಾಡಲಾಗುವುದು. ಈಗಾಗಲೇ ಚುನಾವಣಾ ಸಿಬ್ಬಂದಿಗಳಿಗೆ ಇವಿಎಂ ಬಗ್ಗೆ ಮಾಹಿತಿ - ತರಬೇತಿ ನೀಡಲಾಗಿದ್ದು, ಚುನಾವಣೆ ಸುಸೂತ್ರವಾಗಿ ನಡೆಯಲು ಜಿಲ್ಲಾಡಳಿತ ಎಲ್ಲಾ ರೀತಿಯಲ್ಲೂ ಸಿದ್ದವಾಗಿದೆ ಎಂದರು.
ನೀತಿ ಸಂಹಿತೆ ಜಾರಿಯಾದ ಬಳಿಕ ಜಿಲ್ಲೆಯಲ್ಲಿ 31,00,495 ನಗದು ಹಣ, 1,08,75,000 ಮೌಲ್ಯದ 15 ವಾಹನ ಹಾಗೂ 94,55,496 ಮೌಲ್ಯದ 84285.10 ಲೀಟರ್ ಹೆಂಡ ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.