ಮಂಗಳೂರು, ಏ 16 (Daijiworld News/SM): ರಾಜ್ಯದಲ್ಲಿ ಮಹಾಘಟ್ ಬಂಧನ್ ಮೂಲಕ ದೇವೇಗೌಡ ಹಾಗೂ ಸಿದ್ಧರಾಮಯ್ಯ ಒಟ್ಟಾಗಿದ್ದು, ಡಿ.ಕೆ.ಶಿವಕುಮಾರ್ ಅವರನ್ನು ಸಮುದ್ರ ತೀರದ ದಕ್ಷಿಣ ಕನ್ನಡ ಜಿಲ್ಲೆಗೆ ಸೀಮಿತಗೊಳಿಸಲಾಗಿದೆ ಎಂದು ದಕ್ಷಿಣಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಹಾಗೂ ಶಾಸಕ ಸಂಜೀವ ಮಠಂದೂರು ವ್ಯಂಗ್ಯವಾಡಿದ್ದಾರೆ.
ಪುತ್ತೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಘಟ್ ಬಂಧನ ಮೂಲಕ ದೇವೇಗೌಡರು ಹಾಗೂ ಸಿದ್ಧರಾಮಯ್ಯ ಒಟ್ಟಾದ ಬಳಿಕ ಕಾಂಗ್ರೇಸ್ ನ ಪ್ರಭಾವಿ ಮುಖಂಡ ಡಿ.ಕೆ. ಶಿವಕುಮಾರ್ ರಾಮನಗರ, ಬೆಂಗಳೂರು ಮೊದಲಾದ ಕಡೆಯಿಂದ ಔಟ್ ಆಗಿದ್ದಾರೆ. ಇದೀಗ ಅವರನ್ನು ಸಮುದ್ರ ಕಿನಾರೆಗೆ ಹಾಕುವಂತಹ ಕೆಲಸ ಮಾಡಲಾಗುತ್ತಿದೆ. ಅದೇ ಕಾರಣಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ಡಿ.ಕೆ.ಶಿವಕುಮಾರ್ ರನ್ನು ಉಸ್ತುವಾರಿಯನ್ನಾಗಿ ಮಾಡಲಾಗಿದ್ದು, ಜಿಲ್ಲೆಗೆ ಡಿಕೆಶಿಯಂಥಹ ಹತ್ತು ಜನ ಬಂದರೂ ಬಿಜೆಪಿಯನ್ನು ಸೋಲಿಸಲು ಸಾಧ್ಯವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಐಟಿ ದಾಳಿ ಮೊದಲಾದ ಆರೋಪಗಳನ್ನು ಮೆತ್ತಿಕೊಂಡಿರುವ ಡಿಕೆಶಿ ಹಾಗೂ ಕಾಂಗ್ರೇಸ್ ಪಕ್ಷವನ್ನು ಜಿಲ್ಲೆಯ ಜನತೆ ತಿರಸ್ಕರಿಸಲಿದ್ದಾರೆ ಎಂದ ಅವರು ಈ ಬಾರಿ ಪುತ್ತೂರು ತಾಲೂಕೊಂದರಲ್ಲೇ 40 ಸಾವಿರಕ್ಕೂ ಮಿಕ್ಕಿದ ಲೀಡ್ ಬಿಜೆಪಿ ಅಭ್ಯರ್ಥಿಗೆ ಸಿಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.