ಮಂಗಳೂರು, ಎ16(Daijiworld News/SS): ಮಂಗಳೂರಿಗೆ ಆಗಮಿಸಿದ ಮೋದಿ ಜಿಲ್ಲೆಯ ಯಾವುದೇ ಯೋಜನೆ ಕುರಿತು ಮಾತನಾಡಿಲ್ಲ ಎಂದು ಮುಖ್ಯಮಂತ್ರಿಯ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ ಟೀಕಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2014ರ ಚುನಾವಣೆಯ ಸಂದರ್ಭ ನೀಡಿದ ಆಶ್ವಾಸನೆಗಳನ್ನು ಈಡೇರಿಸಿಲ್ಲ. ನರೇಂದ್ರ ಮೋದಿ 5 ಸಲ ಬಂದು ಹೋದದ್ದೇ ದೊಡ್ಡ ಸಾಧನೆ ಎಂಬಂತೆ ಮಾತನಾಡುತ್ತಿದ್ದಾರೆ. ಮಂಗಳೂರಿಗೆ ಆಗಮಿಸಿದ ಮೋದಿ ಜಿಲ್ಲೆಯ ಯಾವುದೇ ಯೋಜನೆ ಕುರಿತು ಮಾತನಾಡಿಲ್ಲ ಎಂದು ದೂರಿದರು.
ದಕ್ಷಿಣ ಕನ್ನಡ ಜಿಲ್ಲೆಗೆ ತಾವು ನೀಡಿದ ಕೊಡುಗೆಗಳನ್ನು ಹೇಳಲಿಲ್ಲ. ಕೇವಲ ಭಾವನಾತ್ಮಕವಾಗಿ ಮತ ಕೇಳಿದ್ದು ಅಭಿವೃದ್ಧಿ ಬಯಸುವ ಜಿಲ್ಲೆಯ ಜನರಿಗೆ ನಿರಾಸೆಯಾಗಿದೆ. ಶೂನ್ಯ ಸಾಧಕ ಸಂಸದರನ್ನು ಖಂಡಿತಾ ಮತದಾರರು ಸೋಲಿಸಲಿದ್ದಾರೆ. ಈ ಮೂಲಕ ಯುವ ನಾಯಕ ಮಿಥುನ್ ರೈಗೆ ಈ ಬಾರಿ ಅವಕಾಶ ಮಾಡಿಕೊಡಲಿದ್ದಾರೆ ಎಂದು ಹೇಳಿದರು.
ಯುವ ಅಭ್ಯರ್ಥಿಯಾಗಿರುವುದರಿಂದ ಕ್ಷೇತ್ರಾದ್ಯಂತ ಯುವ ಜನತೆಯು ಹೆಚ್ಚಿನ ಒಲವು ವ್ಯಕ್ತಪಡಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಆಶಾದಾಯಕ ವಾತಾವರಣ ಕಂಡುಬಂದಿವೆ. ಸಂಸದ ನಳಿನ್ ಕುಮಾರ್ 10 ವರ್ಷಗಳಲ್ಲಿ ಹೇಳಿಕೊಳ್ಳುವಂತಹ ಸಾಧನೆ ಮಾಡಿಲ್ಲ. ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ 1 ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತಾರೆ. 28 ವರ್ಷಗಳ ಬಳಿಕ ಕಾಂಗ್ರೆಸ್ ಮಂಗಳೂರಿನಲ್ಲಿ ಮತ್ತೆ ಅಧಿಪತ್ಯ ಸ್ಥಾಪಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.