ಮಂಗಳೂರು, ಎ16(Daijiworld News/SS): ಸಂಸದನಾಗಿ ಕಳೆದ ಹತ್ತು ವರ್ಷದಲ್ಲಿ ನಳಿನ್ ಕುಮಾರ್ ಅವರ ಮೇಲೆ ಯಾವುದೇ ಭ್ರಷ್ಟಾಚಾರದ ಆರೋಪವಿಲ್ಲ ಎಂದು ಮಂಗಳೂರು ದಕ್ಷಿಣ ಶಾಸಕ ಡಿ. ವೇದವ್ಯಾಸ್ ಕಾಮತ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ನಳಿನ್ ಅವರ ಆಸ್ತಿ ವಿವರವನ್ನು ನಾಮಪತ್ರ ಸಲ್ಲಿಕೆ ಸಂದರ್ಭ ಬಹಿರಂಗ ಪಡಿಸಲಾಗಿದ್ದು, ಐದು ವರ್ಷದಲ್ಲಿ ಯಾವುದೇ ವ್ಯತ್ಯಾಸ ಆಗಿಲ್ಲ. ಜಿಲ್ಲೆಯ ಪ್ರಜ್ಞಾವಂತ ಜನತೆ ಅವರ ಪ್ರಾಮಾಣಿಕ ಸೇವೆಯನ್ನು ಗುರುತಿಸಿ ಮತ್ತೆ ಅವರನ್ನು ಆಯ್ಕೆ ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಕೂಡ ಭ್ರಷ್ಟಾಚಾರಕ್ಕೆ ಅವಕಾಶ ನೀಡದೆ ದೇಶದ ಆಡಳಿತ ವ್ಯವಸ್ಥೆಯಲ್ಲಿ ಹಿಂದೆಂದು ಕಾಣದ ಬದಲಾವಣೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ದಕ್ಷಿಣ ಕನ್ನಡ ಕ್ಷೇತ್ರವನ್ನು 2 ಬಾರಿ ಪ್ರತಿನಿಧಿಸಿದ ನಳಿನ್ ಕುಮಾರ್ ಕಟೀಲ್ ಅವರು ಕೂಡಾ ಇದೇ ಆದರ್ಶವನ್ನು ಪಾಲಿಸಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಆದರ್ಶ ಯುವ ನಾಯಕ ಎಂದು ಗುರುತಿಕೊಂಡಿರುವುದು ಬಿಜೆಪಿಗೆ ಹೆಮ್ಮೆಯ ವಿಚಾರ ಎಂದು ಹರ್ಷ ವ್ಯಕ್ತಪಡಿಸಿದರು.
ಇಡೀ ದೇಶದ ಜನತೆ ನೋಟುಬಂದಿ ನಿರ್ಧಾರವನ್ನು ಮುಕ್ತಕಂಠದಿಂದ ಶ್ಲಾಘಿಸಿದೆ. ಆದರೆ ಕಾಂಗ್ರೆಸ್ ಅಧ್ಯಕ್ಷ ಮಾತ್ರ ಎಟಿಎಂ ಎದುರು ಸರತಿ ಸಾಲಿನಲ್ಲಿ ನಿಲ್ಲುವ ನಾಟಕ ಮಾಡಿದ್ದರು. ಅಘೋಷಿತ ವಿದೇಶಿ ಆದಾಯ ಮತ್ತು ಆಸ್ತಿ ಹಾಗೂ ತೆರಿಗೆ ಹೇರಿಕೆ ಕಾಯ್ದೆ ಜಾರಿಗೊಳಿಸಿದ್ದು ಮೋದಿ ಸರ್ಕಾರದ ಸಾಧನೆಯಾಗಿದೆ ಎಂದು ಹೇಳಿದರು.