ಮಂಗಳೂರು, ನ 13: ಕರಾವಳಿಯ ಪ್ರಸಿದ್ಧ ಮೇಳಗಳಲ್ಲಿ ಕಟೀಲು ಶ್ರೀದುರ್ಗಾಪರಮೇಶ್ವರಿ ಯಕ್ಷಗಾನ ಮೇಳವೂ ಒಂದು. ಕರಾವಳಿಯ ಜನರ ಬಹು ಬೇಡಿಕೆಯ ಮೇಳವಾದ ಕಟೀಲು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮೇಳದಲ್ಲಿ ಭಾಗವತರ ಬದಲಾವಣೆಯಿಂದ ಇದೀಗ ಕೆಲ ಸಮಸ್ಯೆಗಳು ತಲೆದೊರಿದೆ.
ಕಟೀಲು ಶ್ರೀದುರ್ಗಾಪರಮೇಶ್ವರಿ ಯಕ್ಷಗಾನ ಮೇಳದಲ್ಲಿ ಬಹಳ ಅಪರೂಪವಾಗಿ ಭಾಗವತರ, ಕಲಾವಿದರ ವರ್ಗಾವಣೆಯನ್ನು ಒಂದು ಮೇಳದಿಂದ ಮತ್ತೊಂದು ಮೇಳಕ್ಕೆ ಬದಲಾವಣೆ ಮಾಡುತ್ತಾರೆ. ಅದರಂತೆ ಈ ಬಾರಿಯೂ ಮೇಳದಲ್ಲಿ ಭಾಗವತರ ಬದಲಾವಣೆಯಾಗಿದೆ. ಆದರೆ ಭಾಗವತರನ್ನು ಬದಲಾವಣೆ ಮಾಡಿದ್ದಕ್ಕಾಗಿ 23 ಕಲಾವಿದರು ರಾಜೀನಾಮೆ ನೀಡಿದ್ದಾರೆ.
ತೆಂಕುತಿಟ್ಟಿನ ಮೇರು ಭಾಗವತ, ಯಕ್ಷಧ್ರುವ ಪಟ್ಲ ಸತೀಶ ಶೆಟ್ಟಿ ಅವರನ್ನು 5ನೇ ಮೇಳದಿಂದ 4ನೇ ಮೇಳಕ್ಕೆ ವರ್ಗಾಯಿಸಿದ್ದು. ಈ ರಾದ್ಧಾಂತಕ್ಕೆ ಪ್ರಮುಖ ಕಾರಣವಾಗಿದೆ. ಆದರೆ ಸತೀಶ್ ಪಟ್ಲ ಅವರು ನಾನು ಕಟೀಲಿನ ಯಾವುದೇ ಮೇಳಕ್ಕೆ ಹಾಕಿದರೂ ದೇವಿಯ ಸೇವೆಯನ್ನು ಭಕ್ತಿಯಿಂದ ಮಾಡುತ್ತೇನೆ ಎಂದು ಹೇಳಿದ್ದಾರೆ.
ಅಮ್ಮುಂಜೆ ಮೋಹನ್ ಕುಮಾರ್, ಮಾಧವ ಕೊಳ್ತಮಜಲು, ದಿವಾಣ ಶಿವಶಂಕರ ಭಟ್, ನಗ್ರಿ ಮಹಾಬಲ ರೈ, ಉಜಿರೆ ನಾರಾಯಣ ಹಾಸ್ಯಗಾರ, ಮದ್ದಲೆ ಗಾರರಾದ ಗುರುಪ್ರಸಾದ್ ಬೊಳಿಂಜಡ್ಕ, ಪ್ರಶಾಂತ್ ಶೆಟ್ಟಿ ವಗೆನಾಡು ಹೀಗೆ ಒಟ್ಟು 7 ಮಂದಿ ಕಲಾವಿದರು ರಾಜೀನಾಮೆ ನೀಡಿದ್ದು, ಈ ಕಲಾವಿದರಿಗೆ ಕಟೀಲು ಮೇಳದಲ್ಲಿ ಮತ್ತೆ ಪ್ರವೇಶ ಇಲ್ಲ ಎಂದು ತಿಳಿದುಬಂದಿದೆ.
ಯಕ್ಷಗಾನ ಕಲಾವಿದರಾದ ರಾಕೇಶ್ ರೈ ಅಡ್ಕ ಅವರು, ಪಟ್ಲರು 5ನೇ ಮೇಳದಲ್ಲಿ ಇಲ್ಲದಿದ್ದರೆ ಮೇಳಕ್ಕೆ ಬರುವುದಿಲ್ಲ ಎಂದು ನೇರವಾಗಿ ಹೇಳಿ ಬಿಟ್ಟಿದ್ದಾರೆ. ಹೀಗಾಗಿ ಮೇಳದಲ್ಲಿ ಗೊಂದಲ ಉಂಟಾಗಿದ್ದು, ಕೆಲ ಕಲಾವಿದರು ಮೇಳದಿಂದ ಹೊರ ಹೋಗುವುದು ಸ್ಪಷ್ಟವಾಗಿದೆ.
ಕಟೀಲು ಶ್ರೀದುರ್ಗಾಪರಮೇಶ್ವರಿ ಯಕ್ಷಗಾನ ಮೇಳದ ಕೆಲವು ಕಲಾವಿದರ ಹೆಸರನ್ನು ಅನುಮತಿ ಇಲ್ಲದೆ ರಾಜೀನಾಮೆ ನೀಡಿರುವ ಕಲಾವಿರ ಪಟ್ಟಿಯಲ್ಲಿ ಸೇರಿಸಲಾಗಿದೆ. ಸುಬ್ರಾಯ ಪಾಟಾಳಿ ಮತ್ತು ಪ್ರಶಾಂತ್ ಶೆಟ್ಟಿ ನೆಲ್ಯಾಡಿ ಅವರಿಗೆ ಈ ವಿಷಯ ಗೊತ್ತೇ ಇರಲಿಲ್ಲ. ಅದಾಗ್ಯೂ ಅವರ ಹೆಸರು ರಾಜೀನಾಮೆ ಪಟ್ಟಿಯಲ್ಲಿ ಇತ್ತು. ಇದರಿಂದ ಮೇಳದ ಸಂಚಾಲಕರು ರಾಜಿನಾಮೆ ಸ್ವೀಕರಿಸದೇ ಇರಲು ನಿರ್ಧರಿಸಿದ್ದಾರೆ.
ಕಲಾವಿದರನ್ನುನಿಯಮಬದ್ಧವಾಗಿಯೇ ಬದಲಾಯಿಸುವ ಪರಿಪಾಠ ಹಿಂದಿನ ದಿನಗಳಲ್ಲಿಯೂ ಇತ್ತು. ಆದರೆ ಕಲಾವಿದರಿಂದ ಈ ರೀತಿಯ ಆಕ್ಷೇಪ ಬಂದಿರಲಿಲ್ಲ. ಕಲಾವಿದರು ತಪ್ಪಿಗೆ ಕ್ಷಮೆಯಾಚಿಸಿದರೆ ಮತ್ತೇ ಮೇಳಕ್ಕೆಸೇರಿಸಿಕೊಳ್ಳಲಾಗುವುದು ಎಂದು ಮೇಳದ ಸಂಚಾಲಕ ದೇವಿಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.