ಮಂಗಳೂರು, ಎ17(Daijiworld News/SS): ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಎ.18ರಂದು ಮುಕ್ತ ಮತ್ತು ನ್ಯಾಯಯುತ, ನಿಷ್ಪಕ್ಷವಾಗಿ ಮತದಾನ ಮಾಡಲು ಮತದಾನ ಕೇಂದ್ರಗಳಿಗೆ ಮೊಬೈಲ್ ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ. ಪಿಆರ್ಒ ಮಾತ್ರ ಮೊಬೈಲ್ನ್ನು ಮತದಾನ ಕೇಂದ್ರದಲ್ಲಿ ಇರಿಸಿಕೊಳ್ಳಲು ಅವಕಾಶವಿದ್ದು, ಇತರರಿಗೆ ಮೊಬೈಲ್ ಬಳಕೆಗೆ ಅವಕಾಶವಿಲ್ಲ ಎಂದು ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಈಗಾಗಲೇ ಮುಗಿದಿದ್ದರೂ ನಮ್ಮ ರಾಜ್ಯದಲ್ಲಿ ಮೊದಲ ಹಂತದ ಮತದಾನ ಏ.18ರಂದು ಒಟ್ಟು 14 ಕ್ಷೇತ್ರಗಳಲ್ಲಿ ನಡೆಯಲಿದೆ.
ಉಡುಪಿ-ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ, ಕೋಲಾರ ಕ್ಷೇತ್ರಗಳಲ್ಲಿ ಎ.18ರಂದು ಮತದಾನ ನಡೆಯಲಿದ್ದು ಇಲ್ಲಿನ ಅಭ್ಯರ್ಥಿಗಳ ಬಹಿರಂಗ ಪ್ರಚಾರಕ್ಕೆ (ಮಂಗಳವಾರ) ಸಂಜೆ 6 ಗಂಟೆಗೆ ತೆರೆಬಿದ್ದಿದೆ.