ಮಂಗಳೂರು,ಏ 17(Daijiworld News/MSP): ಲೋಕಸಭಾ ಚುನಾವಣೆಯಲ್ಲಿ , ವಾರಣಾಸಿಯಲ್ಲಿ ನರೇಂದ್ರ ಮೋದಿ ವಿರುದ್ದ ಹಾಗೂ ಅಮೇಠಿಯಲ್ಲಿ ರಾಹುಲ್ ಗಾಂಧಿ ವಿರುದ್ದ ಕಣಕ್ಕಿಳಿಯಲು ಕರಾವಳಿಯ ಪತ್ರಕರ್ತರೊಬ್ಬರು ಸಿದ್ಧರಾಗಿದ್ದಾರೆ. ನಗರದಲ್ಲಿ ಏ.16ರ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಈ ವಿಚಾರವನ್ನು ಖುದ್ದು ಅವರೇ ಬಹಿರಂಗಪಡಿಸಿದ್ದಾರೆ.
ಹೌದು ಕರಾವಳಿಯ ಖ್ಯಾತ ಪತ್ರಿಕೆಯ ಮುಖ್ಯ ಸಂಪಾದಕ ಡಾ. ಯು.ಪಿ. ಶಿವಾನಂದ ಅವರು ’ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಹುಲ್ ಗಾಂಧಿ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದೇನೆ ’ ಎಂದು ಪತ್ರಿಕಾಗೋಷ್ಟಿಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಆಡಳಿತವು ‘ದಿಲ್ಲಿಯಿಂದ ಹಳ್ಳಿಗಲ್ಲ, ಹಳ್ಳಿಯಿಂದ ದಿಲ್ಲಿಗೆ’ ಎಂಬುದನ್ನು ಪ್ರತಿಪಾದಿಸುವ ಸಲುವಾಗಿ ಮೋದಿ, ರಾಹುಲ್ ವಿರುದ್ದ ಚುನಾವಣೆಯಲ್ಲಿ ಕಣಕ್ಕಿಳಿಯಳಿದ್ದೇನೆ. ಮಹಾತ್ಮಾ ಗಾಂಧೀಜಿಯ ಗ್ರಾಮ ಸ್ವರಾಜ್ಯ ಮತ್ತು ರಾಮರಾಜ್ಯದ ಕನಸನ್ನು ನನಸು ಮಾಡುಲೆಂದು ಜನಜಾಗೃತಿಯಲ್ಲಿ ನಾನು ತೊಡಗಿಸಿಕೊಂಡಿದ್ದು, ಬಲಾತ್ಕಾರದ ಬಂದ್ ಮತ್ತು ನೇತ್ರಾವತಿ ನದಿ ತಿರುವು ಯೋಜನೆ ವಿರುದ್ಧ ಗ್ರಾಮೀಣ ಮಟ್ಟದಲ್ಲಿ ಹೋರಾಟ ಮಾಡುತ್ತಾ ಬಂದಿದ್ದೇನೆ.
ಚುನಾವಣೆಗೆ ನಿಲ್ಲುವ ಬಗ್ಗೆ ಸಮಾನ ಮನಸ್ಕರು, ಚಿಂತಕರ ಜತೆ ಸಮಾಲೋಚನೆ ನಡೆಸಿದ್ದೇನೆ. ಇಲ್ಲಿನ ಸಮಸ್ಯೆಗಳ ಬಗ್ಗೆ ಸ್ಥಳೀಯ ನಾಯಕರು ಮಾತೆತ್ತುತ್ತಿಲ್ಲ.ಈ ನಿಟ್ಟಿನಲ್ಲಿ ರಾಷ್ಟ್ರಮಟ್ಟದ ನಾಯಕರ ಗಮನ ಸೆಳೆಯಲು ಪ್ರಧಾನಿ ಮೋದಿ ಹಾಗೂ ರಾಹುಲ್ ಗಾಂಧಿ ವಿರುದ್ಧ ಕಣಕ್ಕಿಳಿಯುವ ನಿರ್ಧಾರ ಮಾಡಿದ್ದೇನೆ’ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಸಂತೋಷ್ ಕುಮಾರ್ ಶಾಂತಿನಗರ, ಉಮೇಶ್ ಮಿತ್ತಡ್ಕ, ಹರೀಶ್ ಬಂಟ್ವಾಳ್, ಭಾಸ್ಕರ ರೈ, ಸನ್ಮಾನ್ ಮಾಧವ ಭಾಗಮಂಡಲ, ಸಿಂಚನ್ ಉರಿಬೈಲ್, ಸೃಜನ್ ಉರಿಬೈಲ್ ಉಪಸ್ಥಿತರಿದ್ದರು.