ಬಂಟ್ವಾಳ,ಏ 17(Daijiworld News/MSP): ಸಾಕು ದನಗಳನ್ನು ಹಟ್ಟಿಯಿಂದ ಕಳ್ಳತನ ಮಾಡಿದ ಘಟನೆ ಸಜೀಪ ಪಡು ಗ್ರಾಮದಲ್ಲಿ ಏ.16 ರ ಮಂಗಳವಾರ ರಾತ್ರಿ ನಡೆದಿದೆ.ಬಂಟ್ವಾಳ ತಾಲೂಕಿನ ಸಜೀಪ ಪಡು ಗ್ರಾಮದ ಮಿತ್ತಪಡ್ಪು ನಿವಾಸಿ ಧರ್ಣಪ್ಪ ಸಪಲ್ಯ ಎಂಬವರ ಹಟ್ಟಿಯಿಂದ ಎರಡು ದನಗಳನ್ನು ತಡ ರಾತ್ರಿ ವೇಳೆ ಕಳ್ಳತನ ಮಾಡಿದ್ದಾರೆ.
ಇನ್ನೇನು ಕರು ಹಾಕಬೇಕಿದ್ದ ಹಸುವನ್ನು ಕೂಡಾ ಕಳ್ಳತನ ಮಾಡಿರುವುದು ಮನೆಯವರಿಗೆ ನೋವು ತಂದಿದೆ. ಕಳೆದ ಎರಡು ವರ್ಷದ ಹಿಂದೆ ನೆರೆ ಮನೆಯ ಸುಬ್ರಹ್ಮಣ್ಯ ಎಂಬವರ ಹಟ್ಟಿಯಿಂದ ಒಂದು ದನ ಕಳವು ಮಾಡಿದ್ದರು.
ದುಷ್ಕರ್ಮಿಗಳು ಒಂದು ತಿಂಗಳ ಹಿಂದೆಯಷ್ಟೇ ಮನೆಯ ನಾಯಿಗೆ ವಿಷ ಹಾಕಿ ಕೊಂದಿದ್ದು, ವಾರದ ಹಿಂದೆ ಧರ್ಣಪ್ಪ ಅವರ ಮನೆಗೆ ಇಬ್ಬರು ಅಪರಿಚಿತರು ದನಮಾರಾಟ ಮಾಡುತ್ತೀರಾ ಎಂದು ಪ್ರಶ್ನಿಸಿದ್ದರು. ಇದಾದ ಬೆನ್ನಲ್ಲೇ ದನ ಕಳ್ಳತನವಾಗಿದೆ. ಚುನಾವಣಾ ಸಂದರ್ಭದಲ್ಲಿ ಬಿಗಿ ಬಂದೋ ಬಸ್ತ್ ಇದ್ದರೂ ದನ ಕಳ್ಳರು ಮಾತ್ರ ಯಾರಿಗೂ ಕ್ಯಾರೇ ಅನ್ನುತ್ತಿಲ್ಲ ಎಂದು ಬೇಸರ ತೋಡಿಕೊಂಡಿದ್ದಾರೆ.