ಬಂಟ್ವಾಳ, ಏ 17(Daijiworld News/SM): ಲೋಕಸಭಾ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಿ ತಮ್ಮ ಹಕ್ಕನ್ನು ಚಲಾಯಿಸುವಂತೆ ವಿವಿಧ ರೀತಿಗಳಲ್ಲಿ ಜಾಗೃತಿಯನ್ನು ಮೂಡಿಸಲಾಗುತ್ತಿದೆ. ವಿವಿಧ ಸಂಘಸಂಸ್ಥೆಗಳು ಈಗಾಗಲೇ ಜಾಗೃತಿಯನ್ನು ಕೂಡ ಮೂಡಿಸಿದೆ. ಆದರೆ, ಬಂಟ್ವಾಳದಲ್ಲಿ ನಡೆದ ಮದುವೆ ಸಮಾರಂಭವೊಂದರಲ್ಲಿ ಕಡ್ಡಾಯ ಮತದಾನ ಮಾಡುವಂತೆ ಸಮಾರಂಭದಲ್ಲಿ ಭಾಗವಹಿಸಿದವರಲ್ಲಿ ಜಾಗೃತಿ ಮೂಡಿಸಲಾಗಿದೆ.
‘ನಮ್ಮನ್ನು ನೀವು ಹರಸಿ ಹಾರೈಸುವ ರೀತಿಯಲ್ಲಿ ನಾಳೆ ನಡೆಯುವ ಚುನಾವಣೆಯಲ್ಲಿ ದೇಶಕ್ಕಾಗಿ ಮತದಾನ ಮಾಡಬೇಕು’ ಎಂಬ ಬಿತ್ತಿಪತ್ರವೊಂದು ಕಾಣಸಿಕ್ಕಿದೆ. ಮತದಾನ ಮಾಡಿ ದೇಶದ ಭವಿಷ್ಯವನ್ನು ರೂಪಿಸಿ ಎಂಬ ಬಿತ್ತಿಪತ್ರ ಕಾಣಸಿಕ್ಕಿದ್ದು, ಬಂಟ್ವಾಳ ತಾಲೂಕಿನ ಸಿದ್ದಕಟ್ಟೆಯ ಮದುವೆ ಮಂಟಪವೊಂದರಲ್ಲಿ.
ಬಂಟ್ವಾಳ ತಾಲೂಕಿನ ಹರ್ಷಲಿ ಸಭಾ ಭವನದಲ್ಲಿ ನಡೆದ ರಾಯಿ ಗ್ರಾಮದ ಶಾಂತಿಪಲ್ಕೆಯ ಸಂತೋಷ್ ಬಂಗೇರ ಹಾಗೂ ಪುತ್ತೂರಿನ ಯುವತಿ ಪ್ರಮೀಳಾ ಮದುವೆ ಸಮಾರಂಭದಲ್ಲಿ ಮದುಮಗ ಕೈಯಲ್ಲಿ ಕಡ್ಡಾಯ ಮತದಾನ ಮಾಡಿ ಎಂಬ ಘೋಷಣೆಯ ಬಿತ್ತಿಪತ್ರವನ್ನು ಹಿಡಿದು ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ.
ಅಲ್ಲದೆ ಮದುಮಕ್ಕಳು ಆರತಾಕ್ಷತೆಗೆ ಮಂಟಪಕ್ಕೆ ಬರುವ ಮುನ್ನ ಮದುಮಗನ ಸ್ನೇಹಿತರು ಸೇರಿ ನೃತ್ಯದ ಮೂಲಕ ಕೂಡ ಮತದಾನದ ಜಾಗೃತಿ ಮೂಡಿಸಿದ್ದಾರೆ. ಮದುವೆ ಸಮಾರಂಭದಲ್ಲಿ ಮತದಾನ ಕಡ್ಡಾಯವಾಗಿ ಮಾಡಿ ಎಂಬ ಘೋಷ ವಾಕ್ಯದ ನೃತ್ಯ ವಿಶೇಷವಾಗಿ ಗಮನ ಸೆಳೆಯಿತು. ಅಲ್ಲದೆ ಭಾರತದ ಬಾವುಟ ಹಿಡಿದು ವಂದೇ ಮಾತರಂ ಗೀತೆಯ ಮೂಲಕ ಮತದಾನ ಮಾಡುವ ಜಾಗೃತಿ ಮೂಡಿಸಲಾಯಿತು.