ಮಂಗಳೂರು, ಎ18(Daijiworld News/SS): ಪ್ರಜಾಪ್ರಭುತ್ವದ ಹಬ್ಬ, ಭವಿಷ್ಯಕ್ಕಾಗಿ ಪ್ರಜೆಗಳು ತಮ್ಮ ಪವರ್ ತೋರಿಸುವ ಅವಕಾಶ ಬಂದಿದೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಮತದಾನ ಎ. 18ರಂದು ನಡೆಯಲಿದ್ದು, ಸರ್ವ ಸಿದ್ಧತೆ ಅಂತಿಮಗೊಂಡಿದೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ.
ಕ್ಷೇತ್ರದಲ್ಲಿ ಒಟ್ಟು 13 ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ನಿರ್ಧರಿಸಲಿದ್ದಾರೆ. ಮತದಾನಕ್ಕೆ ಅನುಕೂಲವಾಗುವಂತೆ ಸಾರ್ವಜನಿಕ ರಜೆ ಘೋಷಿಸಲಾಗಿದೆ. ಬೆಳಗ್ಗೆ 6ರಿಂದ 7ರ ತನಕ ಚುನಾವಣ ಏಜೆಂಟರ ಸಮ್ಮುಖದಲ್ಲಿ 50 ಅಣಕು ಮತಗಳನ್ನು ಚಲಾಯಿಸಲಾಗುತ್ತದೆ. 7 ಗಂಟೆಗೆ ಮತದಾನ ಪ್ರಾರಂಭವಾಗಲಿದೆ.
ಮಂಗಳೂರು ಕಮಿಷನರೆಟ್ ವ್ಯಾಪ್ತಿಯಲ್ಲಿ ಒಟ್ಟು 883 ಮತಗಟ್ಟೆಗಳಿದ್ದು, ಈ ಪೈಕಿ 220 ಕ್ಲಿಷ್ಟಕರ ಹಾಗೂ 663 ಸಾಮಾನ್ಯ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಬಂದೋಬಸ್ತು ಪ್ರಯುಕ್ತ ಡಿಸಿಪಿ 2, ಡಿವೈಎಸ್ಪಿ-ಎಸಿಪಿ 7, ಇನ್ಸ್ಪೆಕ್ಟರ್ 16, ಪಿಎಸ್ಐ 7, ಎಎಸ್ಐ 79, ಎಚ್ಸಿ/ಪಿಸಿ ಮತ್ತು ಹೋಂಗಾರ್ಡ್ ಸಹಿತ ಒಟ್ಟು 1500 ಪೊಲೀಸರು ಹಾಗೂ ಕೇಂದ್ರೀಯ ಪಡೆಯ 2 ಕಂಪೆನಿ ಮತ್ತು 8 ಕೆಎಸ್ಆರ್ಪಿ 12 ಸಿಎಆರ್ ತುಕಡಿಗಳನ್ನು ನಿಯೋಜನೆ ಮಾಡಲಾಗಿದೆ.
ದ.ಕ. ಜಿಲ್ಲಾ ಪೊಲೀಸ್ ವ್ಯಾಪ್ತಿಗೆ ಒಳಪಡುವ ಬೆಳ್ತಂಗಡಿ, ಬಂಟ್ವಾಳ, ಪುತ್ತೂರು, ಸುಳ್ಯ ವಿಧಾನಸಭಾ ಕ್ಷೇತ್ರಗಳಲ್ಲದೆ ಮಂಗಳೂರು ವಿಧಾನಸಭಾ ಕ್ಷೇತ್ರಗಳಲ್ಲಿ ಬರುವ ಮತಗಟ್ಟೆಗಳು ಸೇರಿದಂತೆ ಒಟ್ಟು 978 ಮತಗಟ್ಟೆಗಳಿದ್ದು, 272 ಅತಿ ಸೂಕ್ಷ್ಮ ಮತಗಟ್ಟೆ ಹಾಗೂ 706 ಸಾಮಾನ್ಯ ಮತಗಟ್ಟೆಗಳಾಗಿ ವಿಂಗಡಿಸಲಾಗಿದೆ.
ಜಿಲ್ಲೆಯಲ್ಲಿ 8,45,308 ಪುರುಷರು ಮತ್ತು 8,79,050 ಮಹಿಳೆಯರು ಹಾಗೂ 102 ಇತರರು ಸೇರಿ ಒಟ್ಟು 17,24,460 ಮತದಾರರಿದ್ದಾರೆ.