ಉಡುಪಿ, ಎ18(Daijiworld News/SS): ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಅವರು ತಾಯಿ, ಪತ್ನಿ, ಅಕ್ಕನ ಜತೆ ಇಲ್ಲಿನ ನಾರಾಯಣ ಗುರು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮತದಾನ ಮಾಡಿದರು.
ಮತ ಚಲಾಯಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಎದುರಾಳಿ ಶೋಭಾ ಕರಂದ್ಲಾಜೆಗೆ ಕ್ಷೇತ್ರದಲ್ಲಿ ಓಟ್ ಮಾಡುವ ಅವಕಾಶ ಇಲ್ಲ. ಶೋಭನಿಗೆ ಶೋಭನ ಓಟೇ ಬೀಳುವುದಿಲ್ಲ. ನಾನು ಮೈತ್ರಿ ಅಭ್ಯರ್ಥಿ ಆದಾಗ ಅಪಸ್ವರವಿತ್ತು. ಆದರೆ ಈಗ ಕಾರ್ಯಕರ್ತರಿಗೆ ನಾನು ತೆಗೆದುಕೊಂಡಿರುವುದು ಒಳ್ಳೆಯ ನಿರ್ಧಾರ ಎಂಬ ಭಾವನೆ ಬಂದಿದೆ. ಈ ಬಗ್ಗೆ ಕಾರ್ಯಕರ್ತರು ಮತ್ತು ನಾಯಕರಿಗೆ ಮನವರಿಕೆ ಮಾಡಲಾಗಿದೆ ಎಂದು ತಿಳಿಸಿದರು.
ಈ ಬಾರಿ ಹಿಂದಿನ ಚುನಾವಣೆಗಿಂತಲೂ ಹೆಚ್ಚಿನ ಉತ್ಸಾಹದಲ್ಲಿ ಫೀಲ್ಡ್ ವರ್ಕ್ ಆಗಿದೆ. ಎಲ್ಲಾ ಪ್ರಚಾರದಲ್ಲೂ ನಾವು ಮುಂಚೂಣಿಯಲ್ಲಿದ್ದೇವೆ. ಮೋದಿ ಹೆಸರಿನಲ್ಲಿ ಕೆಟ್ಟ ಜನಪ್ರತಿನಿಧಿಯನ್ನು ಆಯ್ಕೆ ಮಾಡುವುದು ನಮಗೆ ನಷ್ಟ ಎಂದು ಜನರಿಗೆ ಮನವರಿಕೆಯಾಗಿದೆ. ರಾತ್ರಿ ಕಂಡ ಬಾವಿಗೆ ಹಗಲು ಬೀಳುವುದು ಬೇಡ ಎಂಬ ನಿರ್ಧಾರಕ್ಕೆ ಜನ ಬಂದಿದ್ದಾರೆ ಎಂದು ತಿಳಿಸಿದರು.
ಚಿಹ್ನೆ ಬಗ್ಗೆ ಮತದಾರರಿಗೆ ಕಾರ್ಯಕರ್ತರು ಮನದಟ್ಟು ಮಾಡಿದ್ದಾರೆ. ಮೈತ್ರಿ ಧರ್ಮದಲ್ಲಿ ಚೆಹ್ನೆ ಸೆಕೆಂಡರಿ. ಜಾತ್ಯತೀತ ಶಕ್ತಿಗಳು ಒಂದುಗೂಡುವುದು ಮುಖ್ಯ. ಪ್ರಥಮ ಬಾರಿಗೆ ಜೆ.ಡಿ.ಎಸ್ ಚಿಹ್ನೆಗೆ ನನಗೆ ವೋಟ್ ಹಾಕಿರುವುದು ಸಂತೋಷ ತಂದಿದೆ ಎಂದು ಹೇಳಿದ್ದಾರೆ.