ಮಂಗಳೂರು, ಎ18(Daijiworld News/SS): ನಗರದ ದಕ್ಷಿಣ ಕ್ಷೇತ್ರದ ಮತದಾರರ ಪಟ್ಟಿಯಲ್ಲಿರುವ ಕೆಲವರ ಹೆಸರು ಮಾಯವಾಗಿದೆ ಎಂದು ಮಾಜಿ ಶಾಸಕ ಜೆ. ಆರ್ ಲೋಬೋ ಆರೋಪ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳೂರು ದಕ್ಷಿಣ ಕ್ಷೇತ್ರದ ಮತದಾರರ ಪಟ್ಟಿಯಲ್ಲಿರುವ ಕೆಲವರ ಹೆಸರನ್ನು ಉದ್ದೇಶಪೂರ್ವಕವಾಗಿ ತೆಗೆಯಲಾಗಿದೆ. ಯಾವುದೇ ರೀತಿಯ ಮುನ್ಸೂಚನೆ ನೀಡದೇ ಕೆಲ ಮತದಾರರ ಹೆಸರು ಅಳಿಸಿ ಹಾಕಲಾಗಿದೆ. ಮತದಾರರ ಪಟ್ಟಿಯಿಂದ ಹೆಸರು ತೆಗೆದು ಹಾಕಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳೂರು ದಕ್ಷಿಣ ಕ್ಷೇತ್ರದ ಮತಗಟ್ಟೆ ಸಂಖ್ಯೆ ಒಂದರಲ್ಲಿ ಯುವಕನ ಹೆಸರು ಅಳಿಸಿ ಹಾಕಲಾಗಿದೆ. ಬಿಕರ್ನಕಟ್ಟೆಯ ಬೂತ್ ನಂ.55ರಲ್ಲಿ 230 ಮತದಾರರ ಹೆಸರು ಡಿಲೀಟ್ ಮಾಡಲಾಗಿದೆ. ಮಾತ್ರವಲ್ಲ, ಮಂಗಳೂರಿನ ನಾಲ್ಯಪದವಿನಲ್ಲಿ ಎಂಟು ಹೆಸರನ್ನು ತೆಗೆದು ಹಾಕಲಾಗಿದೆ ಎಂದು ದೂರಿದರು.
ಮತದಾರರ ಪಟ್ಟಿಯಿಂದ ಹೆಸರು ತೆಗೆದಿರುವ ಹಿಂದೆ ರಾಜಕೀಯ ಕೈವಾಡವಿದೆ. ಮಾತ್ರವಲ್ಲ, ಹೆಸರು ತೆಗೆದಿರುವ ಕುರಿತು ಯಾವುದೇ ಮಾಹಿತಿ ಇಲ್ಲ. ಪ್ರತಿ ಬೂತ್ನಲ್ಲಿ 25 ಹೆಸರುಗಳನ್ನು ತೆಗೆದು ಹಾಕಲಾಗಿದೆ. ಇದರ ಹಿಂದೆ ವ್ಯವಸ್ಥಿತ ಷಡ್ಯಂತ್ರ ಇದೆ. ಈ ಬಗ್ಗೆ ಸಂಪೂರ್ಣ ತನಿಖೆಗೆ ಚುನಾವಣಾ ಆಯೋಗ ಆದೇಶಿಸಬೇಕು ಎಂದು ಒತ್ತಾಯಿಸಿದ್ದಾರೆ.