ಮಂಗಳೂರು, ಏ 18(Daijiworld News/MSP): ಮತದಾನದ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗಿನಿಂದ ಸಂಜೆಯವರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಕೆಎಸ್ಆರ್ಟಿಸಿ ಹಾಗೂ ಖಾಸಗಿ ಬಸ್ಗಳ ಸಂಚಾರ ವಿರಳವಾಗಿತ್ತು. ಇದರಿಂದಾಗಿ ಪ್ರಯಾಣಿಕರು ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗುವುದಕ್ಕೆ ಸಾಕಷ್ಟು ಪರದಾಡುವ ಸನ್ನಿವೇಶ ಬಹುತೇಕ ಎಲ್ಲ ತಾಲೂಕುಗಳಲ್ಲಿಯೂ ನಿರ್ಮಾಣವಾಗಿತ್ತು.
ಏಕೆಂದರೆ, ಮತದಾನದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 400ಕ್ಕೂ ಹೆಚ್ಚಿನ ಕೆಎಸ್ಸಾರ್ಟಿಸಿ ಬಸ್ಗಳು ಚುನಾವಣ ಕರ್ತವ್ಯಕ್ಕೆ ತೆರಳಿತ್ತು. ಹೀಗಾಗಿ, ಇಡೀದಿನ ಕೆಎಸ್ಆರ್ಟಿಸಿ ಬಸ್ಗಳು ಅಲ್ಲೊಂದು-ಇಲ್ಲೊಂದು ಅನ್ನುವ ರೀತಿಯಲ್ಲಿ ಬಹಳ ವಿರಳವಾಗಿತ್ತು. ಇದರಿಂದ ಜನರು ಬಸ್ಗಾಗಿ ಕಾದು ಕೊನೆಗೆ ಖಾಸಗಿ ವಾಹನಗಳ ಮೊರೆ ಹೋಗುತ್ತಿದ್ದ ದೃಶ್ಯ ಕಂಡುಬಂತು.
ಇನ್ನೊಂದೆಡೆ ಜಿಲ್ಲೆಯಲ್ಲಿ ಮತದಾನದ ದಿನದಂದೇ ಮದುವೆ, ಸೀಮಂತ, ಮುಂತಾದ ಶುಭಸಮಾರಂಭ ಹೆಚ್ಚಿನ ಸಂಖ್ಯೆಯಲ್ಲಿ ನಡೆದಿದ್ದು ಕಾರ್ಯಕ್ರಮಗಳಿಗೆ ತೆರಳಬೇಕಾದವರು ಬಸ್ಸುಗಳಿಲ್ಲದೇ ತೊಂದರೆ ಅನುಭವಿಸುತ್ತಿರುವುದು ಕಂಡುಬಂತು.
ಇನ್ನು ಗ್ರಾಮೀಣ ಭಾಗದಲ್ಲಿ ವಿರಳವಾಗಿ ಸಂಚರಿಸುತ್ತಿರುವ ಬಸ್ಗಳಲ್ಲಿ ಜನರು ಫುಟ್ಬೋರ್ಡ್ನಲ್ಲಿಯೂ ನೇತಾಡಿಕೊಂಡು ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.
ಈ ನಡುವೆ, ಬೆಂಗಳೂರು, ಧಾರವಾಡ, ಹುಬ್ಬಳ್ಳಿ, ಮೈಸೂರು ಮುಂತಾದ ಕಡೆಗಳಿಂದ ಮತದಾನ ಮಾಡುವುದಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಊರಿಗೆ ಬಂದಿದ್ದಾರೆ. ಆದರೆ, ಇದರಿಂದ ಖಾಸಗಿ ಬಸ್ಗಳ ಟಿಕೆಟ್ ದರವು ಬಹಳಷ್ಟು ದುಬಾರಿಯಾಗಿದ್ದು, ಪ್ರಯಾಣಿಕರ ಜೇಬಿಗೆ ಕತ್ತರಿ ಕೂಡ ಬಿದ್ದಿದೆ.