ಮಂಗಳೂರು, ಎ18(Daijiworld News/SS): ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣೆ ಸಾಂಗವಾಗಿ ನೆರವೇರಿದ್ದು, ಎಲ್ಲೂ ಕೂಡಾ ಅಹಿತಕರ ಘಟನೆ, ಗೊಂದಲಗಳಿಗೆ ಅವಕಾಶ ನೀಡದಂತೆ ಚುನಾವಣಾಧಿಕಾರಿಗಳು ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದಾರೆ.
ಮಂಗಳೂರು (ಉಳ್ಳಾಲ) ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಕಲ್ಲಾಪುಪಟ್ಲ ಮತಗಟ್ಟೆ ಸಂಖ್ಯೆ 42ರಲ್ಲಿ ‘ಡೆಮೋ’ ಮತದಾನದ ಸಂದರ್ಭ ಇವಿಎಂನಲ್ಲಿ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಗೊಂದಲ ಉಂಟಾಗಿತ್ತು. ಸ್ಥಳೀಯ ಮಾಜಿ ಕೌನ್ಸಿಲರ್ ಉಸ್ಮಾನ್ ಕಲ್ಲಾಪು ಈ ಬಗ್ಗೆ ಅಧಿಕಾರಿಗಳ ಜೊತೆಗೆ ಮಾತುಕತೆ ನಡೆಸಿದ್ದಾರೆ.
ಬಳಿಕ ಚುನಾವಣಾ ಅಧಿಕಾರಿಗಳು ಹಿರಿಯ ಅಧಿಕಾರಿಗಳೊಂದಿಗೆ ಈ ಬಗ್ಗೆ ಮಾತುಕತೆ ನಡೆಸಿ ಕೂಡಲೇ ಇವಿಎಂ ಮೆಷಿನ್ ಬದಲಾಯಿಸಿ, ಚುನಾವಣಾ ಪ್ರಕ್ರಿಯೆಗಳಿಗೆ ಅನುಕೂಲತೆ ಮಾಡಿಕೊಟ್ಟರು.
ಇವಿಎಂ ಮೆಷಿನ್ಗಳಲ್ಲಿ ಇಂತಹ ಗೊಂದಲ ಆಗುವುದು ಸಹಜ. ನಾವು ಕೂಡಲೇ ಬೇರೆ ಇವಿಎಂ ಮೆಷಿನ್ ಬದಲಾಯಿಸಿ, ಮತದಾರರಿಗೆ ಮನವರಿಕೆ ಮಾಡಿ ಮತಚಲಾವಣೆಗೆ ಅವಕಾಶ ಮಾಡಿಕೊಟ್ಟಿದ್ದೇವೆ. ಮತ್ತೆ ಮತದಾನದ ಪ್ರಕ್ರಿಯೆ ಸಹಜವಾಗಿ ಮುಂದುವರಿದಿದೆ ಎಂದು ಅಧಿಕಾರಿಗಳು ಬಳಿಕ ಪ್ರತಿಕ್ರಿಯೆ ನೀಡಿದ್ದಾರೆ.
ಇವಿಎಂನಲ್ಲಿ ದೋಷ ಕಂಡು ಬಂದ ಈ ದೋಷದ ಹಿನ್ನೆಲೆಯಲ್ಲಿ ಕೆಲಕಾಲ ಮತಗಟ್ಟೆಯ ಸುತ್ತಮುತ್ತ ಕಾರ್ಯಕರ್ತರು ಆಕ್ರೋಶಿತರಾಗಿದ್ದರು. ಅಧಿಕಾರಿಗಳು ಮನವರಿಕೆ ಮಾಡಿದ ಬಳಿಕ ಮತದಾನ ಶಾಂತವಾಗಿ ನಡೆದಿದೆ.