ಮಂಗಳೂರು ನ : ಪಾಲಿಕೆ ವ್ಯಾಪ್ತಿಯಲ್ಲಿ 2018 ಜನವರಿಯೊಳಗೆ ಆರು ಇಂದಿರಾ ಕ್ಯಾಂಟಿನ್ ಹಾಗೂ ಒಂದು ಮಾಸ್ಟರ್ ಕಿಚನ್ ತೆರೆಯಲಾಗುವುದು ಎಂದು ಮೇಯರ್ ಕವಿತಾ ಸನಿಲ್ ಘೋಷಿಸಿದ್ದಾರೆ. ನ 14ರ ಮಂಗಳವಾರ ಪಾಲಿಕೆ ಕಚೇರಿಯಲ್ಲಿ ಮಾದ್ಯಮಗೋಷ್ಟಿಯಲ್ಲಿ ನಡೆಸಿ ಮಾತನಾಡಿದ ಅವರು ರಾಜ್ಯ ಸರ್ಕಾರ ಈಗಾಗಲೇ 5,93,291 ಜನಸಂಖ್ಯೆ ಆಧಾರದ ಮೇಲೆ ಆರು ಕ್ಯಾಂಟೀನ್ ಹಾಗೂ ಒಂದು ಅಡುಗೆಮನೆ ಪ್ರಾರಂಭಿಸಲು ನಿರ್ದೇಶನ ನೀಡಿದೆ ಎಂದರು.
ರಾಜ್ಯದ 173 ನಗರ ಸ್ಥಳೀಯ ಸಂಸ್ಥೆಗಳಲ್ಲಿ 247 ಇಂದಿರಾ ಕ್ಯಾಂಟೀನ್ ಹಾಗೂ 15 ಸಾಮಾನ್ಯ ಅಡುಗೆ ಕೋಣೆಗಳನ್ನು ಪ್ರಾರಂಭಿಸಲು, ಈ ವರ್ಷದ ಅಕ್ಟೋಬರ್ 23 ರಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ನಗರ ಪ್ರದೇಶದಲ್ಲಿ ವಾಸಿಸುವ ಬಡಜನರಿಗೆ ಕೈಗೆಟಕುವ ದರದಲ್ಲಿ ಆಹಾರ ಒದಗಿಸುವ ದೃಷ್ಟಿಯಿಂದ ಅಂದರೆ ಬೆಳಗ್ಗಿನ ಉಪಹಾರ ಐದು ರೂಪಾಯಿಗೆ ಮತ್ತು ಮದ್ಯಾಹ್ನದ ಹಾಗೂ ರಾತ್ರಿ ಊಟ ಹತ್ತು ರೂಪಾಯಿಗೆ ಒದಗಿಸಲು ಸರ್ಕಾರ ಅನುಮೋದನೆ ನೀಡಿದೆ.
ಪಾಲಿಕೆ ವ್ಯಾಪ್ತಿಯಲ್ಲಿ ಈಗಾಗಲೇ ಪ್ರಾರಂಭವಾಗುವ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡುವ ಜಾಗಗಳನ್ನು ಈಗಾಗಲೇ ಗುರುತಿಸಲಾಗಿದೆ.
1.ಸರ್ಕಾರಿ ಸೆಂಟ್ರಲ್ ಮೈದಾನ, ಅತ್ತಾವರ ಗ್ರಾಮ
2.ರಿಕ್ರಿಯೇಶನ್ ಗ್ರೌಂಡ್, ಅತ್ತಾವರ ಗ್ರಾಮ
3.ದೇರೆಬೈಲ್ ಗ್ರಾಮದಲ್ಲಿ ಮುಡಾ ಸಮೀಪ( ಕ್ಯಾಂಟೀನ್ ಮತ್ತು ಮಾಸ್ಟರ್ ಕಿಚನ್)
4.ಕುಂಜತ್ತಬೈಲ್ ಗ್ರಾಮದಲ್ಲಿ ಕಾವೂರು ಶಾಲೆ
5.ಇಡ್ಯಾ ಗ್ರಾಮದ ಪ್ರೈಮರಿ ಹೆಲ್ತ್ ಸೆಚಿಟರ್
ಇನ್ನು ಕ್ಯಾಂಟೀನ್ ಗೆ ಸಂಬಂಧಿಸಿದ ಕಟ್ಟಡಗಳನ್ನು ಕಂದಾಯ ಇಲಾಖೆ, ನಗರ ಸ್ಥಳೀಯ ಸಂಸ್ಥೆ, ನೀರು ಸರಬರಾಜು ಮತ್ತು ಒಳಚರಂಡಿ , ವಿದ್ಯುತ್ ಕಂಪನಿಗಳು, ಪೊಲೀಸ್ ಇಲಾಖೆ ಅಥವಾ ಇತರೆ ಯಾವುದೇ ಸರ್ಕಾರಿ ಸಂಸ್ಥೆಗಳಿಗೆ ಸಂಬಂಧಿಸಿದ ಜಮೀನಿನಲ್ಲಿ ಭೂಮಿಯನ್ನು ವರ್ಗಾವಣೆ ಪ್ರಕ್ರಿಯೆ ಇಲ್ಲದೆ ನಿರ್ಮಿಸಲು ಅನುಮತಿಸಲಾಗಿದೆ ಎಂದರು. ಕಟ್ಟಡ ನಿರ್ಮಾಣಗಳನ್ನು KRIDL ಮೂಲಕ ಸುಮಾರು 2.97 ಕೋಟಿ ವೆಚ್ಚದಲ್ಲಿ ಮಾಡಲು ಆದೇಶದಲ್ಲಿ ಅನುಮೋದನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
.