ಮಂಗಳೂರು, ಎ19(Daijiworld News/SS): ಇಂದು ಗುಡ್ ಫ್ರೈಡೇ. ಜಗತ್ತಿಗೆ ಶಾಂತಿ, ಸೌಹಾರ್ದ, ಸಹೋದರತೆಯ ಸಂದೇಶ ಸಾರಿ ಮಾನವ ಪಾಪ ವಿಮೋಚನೆಗಾಗಿ ಏಸು ಕ್ರಿಸ್ತರು ಶಿಲುಬೆಗೇರಿದ ದಿನ. ಪವಿತ್ರ ಗುರುವಾರದ ಬಳಿಕ ಯೇಸು ಕ್ರಿಸ್ತರನ್ನು ಶಿಲುಬೆಗೇರಿಸಿದ ದಿನವಾಗಿರುವ ಶುಕ್ರವಾರವನ್ನು ಗುಡ್ ಫ್ರೈಡೇಯಾಗಿ (ಶುಭ ಶುಕ್ರವಾರ) ಆಚರಿಸಲಾಗುತ್ತದೆ.
ಗುಡ್ ಫ್ರೈಡೇ ಅಥವಾ ಶುಭ ಶುಕ್ರವಾರ ಮತ್ತೆ ಬಂದಿದೆ. ಕ್ರೈಸ್ತ ಸಮುದಾಯಕ್ಕೆ ಇದು ಬಹಳ ಪವಿತ್ರವಾದ ದಿನವಾಗಿದ್ದು, ಕ್ರೈಸ್ತರು ತಮ್ಮದೇ ಆದ ವಿಶಿಷ್ಠ ರೀತಿಯಲ್ಲಿ ಈ ದಿನವನ್ನು ಕಳೆಯುತ್ತಾರೆ. ಸಾಮಾನ್ಯವಾಗಿ ಎಲ್ಲಾ ಚರ್ಚುಗಳಲ್ಲೂ ಬೆಳಿಗ್ಗೆಯಿಂದಲೇ ಪ್ರಾರ್ಥನೆಗಳು ನಡೆಯುತ್ತವೆ. ಯೇಸು ಕ್ರಿಸ್ತ ತನ್ನ ಜೀವನವಿಡೀ ತಾನು ಸಾರಿದ ಶಾಂತಿ ಪ್ರೀತಿ ಕ್ಷಮೆಯ ಸಂದೇಶವನ್ನು ಪಾಲಿಸಿದ.
ಈ ದಿನ ಜಗತ್ತಿನಾದ್ಯಂತದ ಕ್ರೈಸ್ತ ದೇವಾಲಯಗಳಲ್ಲಿ ಬಲಿಪೂಜೆಗಳು ಇರುವುದಿಲ್ಲ. ಯೇಸು ಕ್ರಿಸ್ತರು ಶಿಲುಬೆಗೇರುವ ಮುನ್ನ ಶಿಲುಬೆಯನ್ನು ಹೊತ್ತು ಸಾಗಿದ ಘಟನಾವಳಿಯನ್ನು ಸ್ಮರಿಸಿ ‘ವೇ ಆ್ ದಿ ಕ್ರಾಸ್’ (ಶಿಲುಬೆಯ ಹಾದಿ) ಭಕ್ತಿ ಮತ್ತು ಶ್ರದ್ಧೆಯಿಂದ ಆಚರಿಸಲಾಗುತ್ತದೆ. ಧ್ಯಾನ, ಉಪವಾಸ ಮಾಡಲಾಗುತ್ತದೆ.
ಕಡಲತಡಿಯ ನಗರಿ ಮಂಗಳೂರಿನಲ್ಲೂ ಕ್ರೈಸ್ತ ಬಾಂಧವರು ಭಕ್ತಿ ಮತ್ತು ಶೃದ್ಧೆಯಿಂದ ಈ ದಿನವನ್ನು ಆಚರಿಸಿಸುತ್ತಾರೆ. ಇಂದು ಬೆಳಗ್ಗಿನಿಂದಲೇ ಉಪವಾಸದ ಮೂಲಕ ವೃತ ಕೈಗೊಂಡಿರುವ ಸಾವಿರಾರು ಭಕ್ತರು ನಗರದ ಚರ್ಚ್ಗಳಿಗೆ ತೆರಳಿ ವಿಶೇಷ ಪಾರ್ಥನೆಯನ್ನು ಸಲ್ಲಿಸುತ್ತಾರೆ.
ಗುಡ್ ಫ್ರೈಡೇ ಕೇವಲ ಒಂದು ದಿನದ ಆಚರಣೆಯಾಗಿರುವುದಿಲ್ಲ. ಗುಡ್ ಫ್ರೈಡೇ ಆರಂಭಕ್ಕೆ ಮೊದಲೇ 40 ದಿನಗಳ ತಪಸ್ಸಿನ ವ್ರತ ನಡೆಸಿ, ಸರಳ ಜೀವನ ನಡೆಸಲಾಗುತ್ತದೆ. ಈ ಅವಧಿಯಲ್ಲಿ ಮೋಜಿನ ಬದುಕು ನಡೆಸುವಂತಿಲ್ಲ, ಮಾಂಸಾಹಾರವನ್ನೂ ತಿನ್ನುವಂತಿಲ್ಲ. ಅಲ್ಲದೆ, ಯಾವುದೇ ಶುಭ ಸಮಾರಂಭಗಳೂ ನಡೆಯುವುದಿಲ್ಲ. ತಪಸ್ಸಿನ ಕಾಲಕ್ಕೆ ವಿದಾಯ ಹೇಳುವ ದಿನವೇ ಈಸ್ಟರ್ ಭಾನುವಾರ. ಈಸ್ಟರ್ ಭಾನುವಾರ ಯೇಸುಕ್ರಿಸ್ತರ ಪುನರುತ್ಥಾನ ಕೊಂಡಾಡುವ ಸಂಭ್ರಮದ ದಿನ. ಶನಿವಾರ ಸಂಜೆಯಿಂದಲೇ ಚರ್ಚ್ಗಳಲ್ಲಿ ಈಸ್ಟರ್ ಸಂಭ್ರಮದ ಸಿದ್ಧತೆ ಆರಂಭಗೊಳ್ಳಲಿದೆ.