ಮಂಗಳೂರು, ಎ19(Daijiworld News/SS): ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ-ಚಿಕ್ಕಮಗಳೂರು ಕ್ಷೇತ್ರಗಳು ಮತದಾನದಲ್ಲಿ ದಾಖಲೆಯನ್ನು ನಿರ್ಮಿಸಿವೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ದಲ್ಲಿ ಶೇ. 77.78ರಷ್ಟು ಪ್ರಮಾಣದ ಮತದಾನವಾಗಿದೆ. 2014ಕ್ಕೆ ಹೋಲಿಸಿದರೆ ಈ ಬಾರಿ ಮತದಾನದಲ್ಲಿ ತುಸು ಹೆಚ್ಚಳವಾಗಿದ್ದು, ಹಿಂದಿನ ದಾಖಲೆಯನ್ನು ಮುರಿದಿದೆ. ಮಾತ್ರವಲ್ಲ, ಉಡುಪಿ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿಯುತವಾಗಿ ಮತದಾನ ನಡೆದಿದೆ.
ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮಿಥುನ್ ರೈ ಪ್ರತಿಕ್ರಿಯಿಸಿದ್ದು, ಮತದಾರರು ತನ್ನ ಅಭ್ಯರ್ಥಿತನದ ಮೇಲೆ ವಿಶ್ವಾಸವಿರಿಸಿ ಮತ ಚಲಾಯಿಸಿರುವುದು ಸಂತಸ ತಂದಿದೆ. ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ದಕ್ಷಿಣ ಕನ್ನಡ ಲೋಕಸಭಾ ಚುನಾವಣೆಯಲ್ಲಿ ಶಾಂತಿಯುತವಾಗಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದಲ್ಲದೆ, ತನಗೆ ಮತ ನೀಡಿ ಆಶೀರ್ವದಿಸಿದ ಎಲ್ಲರಿಗೂ ಆಭಾರಿಯಾಗಿರುತ್ತೇನೆ ಎಂದು ಧನ್ಯವಾದಗಳನ್ನು ಹೇಳಿದ್ದಾರೆ.
ಮಾತ್ರವಲ್ಲ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿಯುತ ಮತ್ತು ನ್ಯಾಯ ಸಮ್ಮತ ಚುನಾವಣೆಯನ್ನು ನಡೆಸಲು ಶ್ರಮಿಸಿದ ಅಧಿಕಾರಿ ವರ್ಗಕ್ಕೂ, ಅದೇ ರೀತಿಯಲ್ಲಿ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಪ್ರತಿಯೊಬ್ಬ ಸಿಬ್ಬಂದಿಗೂ ಧನ್ಯವಾದ ಎಂದು ಹೇಳಿದ್ದಾರೆ.