ಮಂಗಳೂರು, ಏ 19(Daijiworld News/MSP): ದ.ಕನ್ನಡ ಲೋಕಸಭೆಗೆ ಗುರುವಾರ ಮತದಾನ ನಡೆದಿದ್ದು, ಈಗ ಮತದಾರರ ಚಿತ್ತ ಮತ ಎಣಿಕೆಯತ್ತ ಹೊರಳಿದೆ. ಹೌದು ಮತ ಪೆಟ್ಟಿಗೆಯಲ್ಲಿ ಭದ್ರವಾಗಿ ಸೇರಿರುವ ಜಿಲ್ಲೆಯ 13 ಅಭ್ಯರ್ಥಿಗಳ ಭವಿಷ್ಯ ಏನೆಂಬುದು ಮೇ 23 ರಂದು ಹೊರಬೀಳಲಿದೆ. ರಾಜಕೀಯ ಪಕ್ಷಗಳು ಪ್ರತಿಷ್ಠೆಯಾಗಿ ಪಡೆದಿರುವ ಮಹಾಸಮರಕ್ಕೆ ಗುರುವಾರ ಜಿಲ್ಲೆಯಲ್ಲಿ ಮತದಾನ ನಡೆದಿದ್ದು, ಈಗ ಎಲ್ಲರ ಚಿತ್ತ ಮತ ಎಣಿಕೆಯತ್ತ ನೆಟ್ಟಿದೆ. ಇತ್ತ ಅಭ್ಯರ್ಥಿಗಳು ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ತನ್ಮಯರಾಗಿದ್ದಾರೆ.
ಸಾಂದರ್ಭಿಕ ಚಿತ್ರ
ಇದೇ ಮೊದಲ ಬಾರಿಗೆ ದ. ಕ ಲೋಕಸಭಾ ಕ್ಷೇತ್ರದ ಮತ ಎಣಿಕೆಯನ್ನು ಮಂಗಳೂರು ನಗರದ ಹೊರವಲಯದಲ್ಲಿರುವ ಸುರತ್ಕಲ್ ಎನ್ ಐ ಟಿ ಕೆ ಆವರಣಕ್ಕೆ ನಿಗದಿಪಡಿಸಲಾಗಿದೆ. ಹೀಗಾಗಿ ಗುರುವಾರ ಮತದಾನದ ಬಳಿಕ ವಿವಿಪ್ಯಾಟ್, ಇವಿಎಂ ಮೆಷಿನ್ ಅನ್ನು ಬಿಗಿಭದ್ರತೆಯಲ್ಲಿ ಎನ್ ಐ ಟಿ ಕೆ ಯಲ್ಲಿ ಇರಿಸಲಾಗಿದೆ. ಮಾತ್ರವಲ್ಲದೆ ಅರೆಮಿಲಿಟರಿ ಪಡೆಯಿಂದ ವಿಶೇಷ ಭದ್ರತೆಯಲ್ಲಿ ನಿಯೋಜಿಸಲಾಗಿದೆ.
ಮತ ಎಣಿಕೆಗಾಗಿ ಇನ್ನು ಬರೋಬ್ಬರಿ 1 ತಿಂಗಳು ಕಾಯಬೇಕಾದ ಹಿನ್ನಲೆಯಲ್ಲಿ ಭದ್ರತೆಯ ದೃಷ್ಟಿಯಿಂದ ಹಾಗೂ ವಿವಿ ಪ್ಯಾಟ್ ಗಳನ್ನು ಇಡಲು ಸೂಕ್ತ ಸ್ಥಳಾವಕಾಶ ಅಗತ್ಯದ ಕಾರಣದಿಂಡ ಮತ ಎಣಿಕೆಯ ಕೇಂದ್ರವನ್ನು ಈ ಬಾರಿ ಬದಲಾಯಿಸಲಾಗಿದೆ