ಮಂಗಳೂರು, ಎ20(Daijiworld News/SS): ತನ್ನ ಜೀವದ ಹಂಗು ತೊರೆದು 16 ದಿನಗಳ ಮಗುವಿನ ಪ್ರಾಣ ಉಳಿಸಲು 452 ಕಿ.ಮೀ. ದೂರವನ್ನು ಕೇವಲ 4 ಗಂಟೆ 45 ನಿಮಿಷಗಳಲ್ಲಿ ಕ್ರಮಿಸಿದ ಆಂಬ್ಯುಲೆನ್ಸ್ ಡ್ರೈವರ್ ಹಸನ್ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.
ಕಳೆದ ಕೆಲ ದಿನಗಳ ಹಿಂದೆ ಸಿಗ್ನಲ್ ಫ್ರೀ ವ್ಯವಸ್ಥೆಯಲ್ಲಿ ಆರೋಗ್ಯದ ಸಮಸ್ಯೆಯಿದ್ದ 16 ದಿನದ ಮಗುವನ್ನು ಆಂಬುಲೆನ್ಸ್ ಮೂಲಕ ಮಂಗಳೂರಿನಿಂದ ಕೊಚ್ಚಿಗೆ ಕರೆದೊಯ್ಯಲಾಗಿತ್ತು. ಉದುಮ ಮುಕ್ಕುನ್ನತ್ ಶಿಹಾಬ್ ತಂಙಲ್ ಚಾರಿಟೇಬಲ್ ಟ್ರಸ್ಟ್ನ ಆಂಬುಲೆನ್ಸ್ ಮೂಲಕ ಮಗುವನ್ನು ಕೊಚ್ಚಿ ಆಸ್ಪತ್ರೆಗೆ ತಲುಪಿಸಲಾಗಿತ್ತು.
ಕಾಸರಗೋಡಿನ ಸಾನಿಯಾ ಮತ್ತು ಮಿಥಾ ದಂಪತಿಯ 16 ದಿನಗಳ ಮಗು ಮಂಗಳೂರಿನ ಎ.ಜೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿತ್ತು. 16 ದಿನದ ಹಿಂದೆ ಜನ್ಮನೀಡಿದ ಮಗುವಿಗೆ ಹೃದಯ ಸಂಬಂಧ ಕಾಯಿಲೆ ಕಾಣಿಸಿಕೊಂಡಿತ್ತು. ಆ ಮಗುವಿನ ಹೃದಯದಲ್ಲಿ ಸಣ್ಣ ರಂಧ್ರವಿರುವುದು ಪತ್ತೆಯಾಗಿತ್ತು. ಹೀಗಾಗಿ ಹೆಚ್ಚಿನ ಚಿಕಿತ್ಸಾಗಿ ಎರ್ನಾಕುಲಂನಲ್ಲಿರುವ ಆಸ್ಪತ್ರೆಗೆ ತಲುಪಿಸಲು ನಿರ್ದೇಶನ ನೀಡಲಾಗಿತ್ತು.
ಈ ಸವಾಲನ್ನು ಸ್ವೀಕರಿಸಿದ ಆಂಬುಲೆನ್ಸ್ ಚಾಲಕ ಹಸನ್ ಕೇವಲ 4 ಗಂಟೆ 45 ನಿಮಿಷದೊಳಗೆ ಮಗುವನ್ನು ಆಸ್ಪತ್ರೆಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದರು.
ಸಿಗ್ನಲ್ ಫ್ರೀ ವ್ಯವಸ್ಥೆಗಾಗಿ ಅನಾರೋಗ್ಯಕ್ಕೀಡಾಗಿದ್ದ ಮಗುವಿನ ಕುಟುಂಬಸ್ಥರು ಎನ್ಜಿಒ ನೆರವಿನೊಂದಿಗೆ ಸಾಮಾಜಿಕ ತಾಣದಲ್ಲಿ ಪ್ರಚಾರ ಮಾಡಿದ್ದರು. ಕೇರಳದ ವಿವಿಧ ಜಿಲ್ಲೆಗಳಲ್ಲಿ ಹಾದು ಹೋಗುವಾಗ ಸಂಚಾರ ನಿಯಂತ್ರಿಸಲು ಸೋಶಿಯಲ್ ಮೀಡಿಯಾ ಮೂಲಕ ಪೋಸ್ಟ್ ಹಾಕಲಾಗಿತ್ತು. ಜನರು ಇದಕ್ಕೆ ಸಹಕಾರ ನೀಡಿದ್ದರು.
ಇದೀಗ ತನ್ನ ಪ್ರಾಣವನ್ನು ಲೆಕ್ಕಿಸದೆ ಮಗುವಿನ ಪ್ರಾಣಕ್ಕಾಗಿ ಸಾಹಸ ಮೆರೆದ ಹಸನ್ ಆ್ಯಂಬುಲೆನ್ಸ್ ಚಲಾಯಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಪ್ರಶಂಸೆ ವ್ಯಕ್ತವಾಗಿದೆ.
ಮಾತ್ರವಲ್ಲ, ಮಂಗಳೂರಿನಿಂದ ಕೇರಳಕ್ಕೆ ಬರುತ್ತಿರುವ ಆಂಬ್ಯೂಲೆನ್ಸ್ ಗೆ ಸಂಪೂರ್ಣ ಸಹಕಾರ ನೀಡುವಂತೆ ಆದೇಶಿಸಿದ್ದ ಸಿಎಂ ಪಿಣಾರಾಯ್ ವಿಜಯನ್ ಕೂಡ, ಆಂಬ್ಯೂಲೆನ್ಸ್ ಚಾಲಕ ಹಸನ್ ಸಾಹಸಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.