ಮಂಗಳೂರು, ಎ20(Daijiworld News/SS): ಭೋಪಾಲ್ ಲೋಕಸಭಾ ಕ್ಷೇತ್ರದ ಪ್ರಗ್ಯಾ ಸಿಂಗ್ ಠಾಕೂರ್ ಅವರನ್ನು ರಕ್ಷಣೆ ಮಾಡುವ ಮೂಲಕ ಭಯೋತ್ಪಾದನೆ ಬಗ್ಗೆ ಬಿಜೆಪಿ ತನ್ನ ನಿಲುವನ್ನು ತೋರಿಸಿದೆ ಎಂದು ಕಾಂಗ್ರೆಸ್ ವಕ್ತಾರ ಎ.ಸಿ. ವಿನಯರಾಜ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಎ.ಸಿ. ವಿನಯರಾಜ್, ಪ್ರಗ್ಯಾ ಸಿಂಗ್ ಠಾಕೂರ್ ಮಾಡಿದ ವಿವಾದಾತ್ಮಕ ಹೇಳಿಕೆಗಳನ್ನು ನಾವು ಬಲವಾಗಿ ಖಂಡಿಸುತ್ತೇವೆ. ರಾಷ್ಟ್ರೀಯತೆಯ ಬಗ್ಗೆ ಮಾತನಾಡುವ ಬಿಜೆಪಿ, ಭೋಪಾಲ್ ಕ್ಷೇತ್ರದಲ್ಲಿ ಪ್ರಗ್ಯಾ ಸಿಂಗ್ ಠಾಕೂರ್ ಅವರನ್ನು ಬೆಂಬಲಿಸಿ ರಕ್ಷಣೆ ಮಾಡುವ ಮೂಲಕ ಭಯೋತ್ಪಾದನೆ ಬಗ್ಗೆ ತನ್ನ ನಿಲುವನ್ನು ತೋರಿಸಿದೆ ಎಂದು ದೂರಿದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ಬಿಜೆಪಿ ಮುಖಂಡರು ಪ್ರಗ್ಯಾ ಸಿಂಗ್ ಠಾಕೂರ್ ಅವರ ವಿವಾದಾತ್ಮಕ ಟೀಕೆಗಳಿಗೆ ವಿರುದ್ಧವಾಗಿ ಒಂದೇ ಒಂದು ಪದವನ್ನು ಹೇಳಲಿಲ್ಲ. ಭಯೋತ್ಪಾದಕ ಅಜ್ಮಲ್ ಕಸಬ್ ಅವರನ್ನು ಸಮರ್ಥಿಸಿಕೊಂಡಿದ್ದಾರೆ. ಒಂದು ವೇಳೆ ಪ್ರಧಾನಿ ನರೇಂದ್ರ ಮೋದಿ ಹುತಾತ್ಮರನ್ನು ಗೌರವಿಸಿದರೆ ಪ್ರಗ್ಯಾ ಸಿಂಗ್ ಠಾಕೂರ್ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಹುತಾತ್ಮರಾಗಿರುವ ಹೇಮಂತ್ ಕರ್ಕೇರಾ ಅವರ ವಂಶವನ್ನು ನಾಶ ಮಾಡಬೇಕು ಎಂದು ಪ್ರಗ್ಯಾ ಸಿಂಗ್ ಠಾಕೂರ್ ಹೇಳಿಕೆ ನೀಡಿದ್ದಾರೆ. ಒಂದು ವೇಳೆ ಹುತಾತ್ಮರ ಬಗ್ಗೆ ಸರ್ಕಾರಕ್ಕೆ ಗೌರವವಿದ್ದರೆ ಪ್ರಗ್ಯಾ ಸಿಂಗ್ ಠಾಕೂರ್ ವಿರುದ್ಧ ಕ್ರಮ ಕೈಗೊಳ್ಳಬೇಕು. ದೇಶ ಕಾಯುವ ಸೈನಿಕರು, ಪೊಲೀಸರ ಬಗ್ಗೆ ಅವಹೇಳನವಾಗಿ ಮಾತನಾಡಿರುವುದು ಅವರಿಗೆ ದೇಶದ್ರೋಹಿ ಎಂಬ ಹಣೆಪಟ್ಟಿ ಕೊಟ್ಟಂತಾಗಿದೆ ಎಂದು ಕಿಡಿ ಕಾರಿದರು.
ಸದಾ ರಾಷ್ಟ್ರೀಯತೆಯ ಬಗ್ಗೆ ಮಾತನಾಡುವ ಬಿಜೆಪಿ ಪ್ರಗ್ಯಾ ಸಿಂಗ್ ಠಾಕೂರ್ ಅವರ ಟೀಕೆಗಳಿಗೆ ಮೌನವಾಗಿದೆ. ಹೀಗಾಗಿ ಬಿಜೆಪಿ ಯಾವ ರೀತಿಯ ಸಂದೇಶವನ್ನು ಜನರಿಗೆ ತಲುಪಿಸಲು ಪ್ರಯತ್ನಿಸುತ್ತಿದೆ ಎಂಬುವುದು ಗೊತ್ತಾಗುತ್ತದೆ ಎಂದು ಹೇಳಿದ್ದಾರೆ.