ಮಂಗಳೂರು, ನ 14: ಬಹುನಿರೀಕ್ಷಿತ "ಪಡೀಲು ರೈಲ್ವೇ ಕೆಳಸೇತುವೆ" ಸಾರ್ವಜನಿಕರಿಗೆ ಮುಕ್ತವಾಗಿದೆ . ಸುಮಾರು 16.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಕೆಳಸೇತುವೆಯನ್ನು ಬುಧವಾರ ಸಂಸದ ನಳೀನ್ ಕುಮಾರ್ ಕಟೀಲ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಈ ಹಿಂದೆಯೇ ಉದ್ಘಾಟನೆಯಾಗಬೇಕಾಗಿದ್ದ ಬಹುಬೇಡಿಕೆ ಕೆಳಸೇತುವೆಯ ಕಾಮಗಾರಿ ಮಳೆಗಾಲ, ಹಾಗೂ ತಾಂತ್ರಿಕ ಹೀಗೆ ಹಲವು ಕಾರಣಗಳಿಂದ ವಿಳಂಬವಾಗಿದೆ ಎಂದರು. ಸುರತ್ಕಲ್- ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿಯನ್ನು ಸಾಗರ್ಮಾಲಾ ಯೋಜನೆಯಡಿ ೫೦೦ ಕೋ.ರೂ. ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸಲು ಕೇಂದ್ರ ಸರಕಾರ ಮಂಜೂರಾತಿ ನೀಡಿದೆ ತಿಳಿಸಿದರು.
ಹಳೆ ಸೇತುವೆ ಕಾಮಗಾರಿ
ಪಡೀಲಿನ ಹಳೆ ಕೆಳಸೇತುವೆಯು ತೆರೆದ ಸೇತುವೆಯಾಗಿರುವುದರಿಂದ ಅದರ ಕಾಮಗಾರಿ ನಡೆಯಲಿದೆ. ಜತೆಗೆ ಇದು ತಗ್ಗು ಪ್ರದೇಶವಾದ ಹಿನ್ನೆಲೆಯಲ್ಲಿ ಮಳೆನೀರು ನಿಂತು ರಸ್ತೆಯೂ ಪದೇ ಪದೇ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ಈಗ ಹೆದ್ದಾರಿಯನ್ನು ಎತ್ತರಗೊಳಿಸುವ ಕಾಮಗಾರಿಯೂ ನಡೆಯಲಿದೆ. ಹಳೆಯ ಸೇತುವೆಯ ಕಾಮಗಾರಿ ಆರಂಭಗೊಂಡರೆ ವಾಹನ ಸಂಚಾರ ಮೊಟಕುಗೊಳಿಸುವ ಸಾಧ್ಯತೆಯೂ ಇದೆ.