ಕುಂದಾಪುರ, ಏ 20(Daijiworld News/MSP): ಮೀನುಗಾರರನ್ನು ಎಸ್ಟಿಗೆ ಸೇರಿಸಬೇಕು ಎನ್ನುವ ನೆಲೆಯಲ್ಲಿ ಎರಡು ಬಾರಿ ರಾಜ್ಯ ಸರ್ಕಾರದ ಮೂಲಕ ಪ್ರಸ್ತಾವನೆ ಕೇಂದ್ರಕ್ಕೆ ಸಲ್ಲಿಸಿದರೂ ಕೂಡಾ ಅಲ್ಲಿ ತಿರಸ್ಕೃರಿಸಲಾಗಿದೆ. ಮೀನುಗಾರರಿಗೆ ಡಿಸೆಲ್ ಸಬ್ಸಿಡಿಯಾಗಲಿ ಇತರ ಬೇಡಿಕೆಯಾಗಲಿ ಈಡೇರಿಲ್ಲ. ಎಂಟು ಮೀನುಗಾರರು ನಾಪತ್ತೆಯಾಗಿ ೧೫೦ ದಿನ ಕಳೆದರೂ ಹುಡುಕುವ ಪ್ರಯತ್ನ ಹೋಗಲಿ, ಅವರು ಏನಾಗಿದ್ದಾರೆ ಎನ್ನುವ ಮಾಹಿತಿಯನ್ನು ನೀಡುತ್ತಿಲ್ಲ. ಆ ಕುಟುಂಬಗಳಿಗೆ ಸ್ಪಂದಿಸುವ ಕೆಲಸವೂ ಕೂಡಾ ಕೇಂದ್ರ ಸರ್ಕಾರದಿಂದ ಆಗುತ್ತಿಲ್ಲ. ಆ ಎಲ್ಲಾ ಹಿನ್ನೆಲೆಯಲ್ಲಿ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ನಾವೆಲ್ಲಾ ಫಿಲ್ಡಿಗೆ ಈಳಿಯಬೇಕಾಯಿತು. ಬೈಂದೂರು ಕ್ಷೇತ್ರದಲ್ಲಿ ಈ ತನಕ ಫೀಲ್ಡ್ಗೆ ಇಳಿದಿಲ್ಲ. ಮತ್ತೆ ಮತ್ತೆ ಮೀನುಗಾರರ ತಾಳ್ಮೆ ಪರೀಕ್ಷೆ ಮಾಡಬೇಡಿ ಎಂದು ಡಾ | ಜಿ.ಶಂಕರ್ ಬಿಜೆಪಿಯ ಸ್ಟಾರ್ ಪ್ರಚಾರಕಿ ಚಿತ್ರನಟಿ ತಾರಾ ಅವರನ್ನು ತೀವ್ರ ತರಾಟೆಗೆ ತಗೆದುಕೊಂಡ ಪರಿ ಇದು.
ಸಾಂದರ್ಭಿಕ ಚಿತ್ರ
ಬಗ್ವಾಡಿ ರಥೋತ್ಸವದ ಪ್ರಯುಕ್ತ ಎ.19ರಂದು ಮಧ್ಯಾಹ್ನ ಧಾರ್ಮಿಕ ಸಭೆ ನಡೆಯುತ್ತಿತ್ತು. ಈ ಸಂದರ್ಭ ಬಿಜೆಪಿ ಪ್ರಚಾರಕ್ಕೆ ಬಂದಿದ್ದ ಚಿತ್ರನಟಿ ತಾರಾ ಹಾಗೂ ಕ್ಷೇತ್ರದ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಅಲ್ಲಿಗೆ ಬಂದರು. ಜಿ.ಶಂಕರ್ ಅವರು ವೇದಿಕೆಯಿಂದ ಇಳಿದು ಬಂದು, ಗೌರಯುತವಾಗಿ ಕಾರ್ಯಕ್ರಮಕ್ಕೆ ಸ್ವಾಗತಿಸಿಕೊಂಡು ಕಳೆದ ಹತ್ತು ವರ್ಷಗಳಿಂದ ಈಡೇರದ ಮೀನುಗಾರರ ಸಮಸ್ಯೆಗಳ ಅವರ ಮುಂದಿಟ್ಟರು.
ಅದೆಷ್ಟೋ ಮೀನುಗಾರರು ಇವತ್ತು ಬಿಜೆಪಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ನಾನು ಕೂಡಾ ಯಾವುದೇ ರಾಜಕೀಯ ಪಕ್ಷವನ್ನು ಬೆಂಬಲಿಸಿದವನ್ನಲ್ಲ. ಆದರೆ ಈಗ ಮೀನುಗಾರರ ಹಿತ ರಕ್ಷಣೆಗಾಗಿ ಫಿಲ್ಡ್ಗೆ ಇಳಿಯಲೇಬೇಕಾಯಿತು. ಮಾಜಿ ಮುಖ್ಯ ಮಂತ್ರಿ ಬಿ,.ಎಸ್ ಯಡಿಯೂರಪ್ಪನವರು ನನಗೆ ಆತ್ಮೀಯರಾಗಿದ್ದಾರೆ. ಸುಕುಮಾರ ಶೆಟ್ಟರು ಕೂಡಾ ನನಗೆ ಆತ್ಮೀಯರೆ. ಆದರೆ ಸಮಸ್ತ ಮೀನುಗಾರರ ವಿಚಾರ ಬಂದಾಗ ಅವರ ಹಿತ ಕಾಪಾಡುವುದು ನನ್ನ ಕರ್ತವ್ಯ ಎಂದ ಅವರು, ನಾವು ಬೈಂದೂರು ಕ್ಷೇತ್ರಕ್ಕೆ ಇನ್ನೂ ಕಣಕ್ಕಿಳಿದಿಲ್ಲ. ನಮ್ಮ ಬೇಡಿಕೆಯನ್ನು ಯಡಿಯೂರಪ್ಪನವರಿಗೆ ತಿಳಿಸಿ, ಎರಡು ಮೂರು ದಿನದಲ್ಲಿ ನಮಗೆ ಭರವಸೆ ಸಿಗದೆ ಇದ್ದರೆ ಮೀನುಗಾರರು ಈ ಚುನಾವಣೆಯಲ್ಲಿ ಏನು ಮಾಡುತ್ತಾರೆ ನೋಡಿ ಎಂದು ಶಾಸಕರಿಗೆ ಸೂಚಿಸಿದರು.