ಮಂಗಳೂರು, ನ 15 : ಕಾರ್ಮಿಕರನ್ನು ಹೊರಕ್ಕೆ ಹಾಕಿ ಲೌಕೌಟ್ ಮಾಡಿರುವ ಹಿನ್ನೆಲೆಯಲ್ಲಿ ಸುಜ್ಲಾನ್ ಕಾರ್ಮಿಕರ ಧರಣಿ ಎರಡನೇ ದಿನಕ್ಕೆ ಮುಂದುವರೆದಿದೆ. ಇಂಟಕ್ ಉಡುಪಿ ಜಿಲ್ಲಾಧ್ಯಕ್ಷ ಗಣೇಶ್ ಕೋಟ್ಯಾನ್ ಹಾಗೂ ನವೀನ್ ಜೆ ಶೆಟ್ಟಿ ಮತ್ತು ದೀಪಕ್ ಎರ್ಮಾಳು ರವರ ನೇತೃತ್ವದಲ್ಲಿ ಸುಜ್ಲೋನ್ ಗೇಟಿನ ಹೊರಗೆ ನೂರಾರು ಕಾರ್ಯಕರ್ತರು ತಮ್ಮ ಬೇಡಿಕೆಗಳೊಡನೆ ಧರಣಿ ನಡೆಸುತ್ತಿದ್ದಾರೆ. ಮಂಗಳವಾರ ಕಂಪನಿ ಗೇಟ್ಗೆ ಬೀಗ ಹಾಕಿ ಲಾಕ್ ಔಟ್ ಘೋಷಣೆ ಮಾಡಿ ಯಾವುದೇ ಕಾರ್ಮಿಕರನ್ನು ಗೇಟಿನ ಒಳಗಡೆ ಬಿಡದೆ ಇದ್ದ ಪ್ರಸಂಗ ನಡೆದು ಕೆಲಸಕ್ಕಾಗಿ ಬಂದ ಕಾರ್ಮಿಕರು ಹೊರಗಡೆ ನಿಲ್ಲುವಂತಾಗಿತ್ತು. ಅತಂತ್ರ ಸ್ಥಿತಿಯಲ್ಲಿದ್ದ ಕಾರ್ಮಿಕರು ಕಂಪನಿ ಮುಖ್ಯಸ್ಥರನ್ನು ಮಾತನಾಡಲೂ ಬಿಡಲಿಲ್ಲ ಎನ್ನುವ ಆರೋಪ ವ್ಯಕ್ತವಾಗಿದೆ.ಇದಕ್ಕೆ ಪೂರಕವೆಂಬಂತೆ ಇಂದು ಕೂಡಾ ಕಂಪನಿಗೆ ಸಂಬಂಧ ಪಟ್ಟವರು ಯಾರೂ ಹಾಜರಿಲ್ಲ. ಜೊತೆಗೆ ಸುಮಾರು 60 ಕಾರ್ಮಿಕರನ್ನು ತಮ್ಮ ಜೊತೆ ಇರಿಸಿ ಅವರನ್ನು ರಜೆ ಕೊಟ್ಟು ಮನೆಗೆ ಕಳುಹಿಸಿ ನಮಗೆ ಮಾತ್ರ ಲಾಕ್ಔಟ್ ಎಂದು ನಾಟಕವಾಡುತ್ತಿದ್ದಾರೆ ಎಂದು ಮುಷ್ಕರ ನಿರತ ಕಾರ್ಮಿಕರು ದೂರಿದ್ದಾರೆ.