ಉಡುಪಿ, ಏ21(Daijiworld News/SM): ಉಡುಪಿ ಶ್ರೀ ಪುತ್ತಿಗೆ ಮಠದ ಶ್ರೀ ಮದುಪೇಂದ್ರ ತೀರ್ಥ ಶ್ರೀ ಪಾದರ 750 ವರ್ಷಗಳ ಗುರುಪರಂಪರೆಯಲ್ಲಿ ಮೂವತ್ತನೇ ಯತಿಗಳಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ತಮ್ಮ ಹನ್ನೆರಡನೇ ವಯಸ್ಸಿನಲ್ಲಿ ಬಾಲಸನ್ಯಾಸವನ್ನು ಸ್ವೀಕರಿಸಿ ವಿಶ್ವದಾದ್ಯಂತ ಧರ್ಮಪ್ರಸಾರ ಮಾಡುವವರಾಗಿ ನಾಳೆಗೆ 45 ಸಂವತ್ಸರಗಳನ್ನು ಪೂರೈಸಲಿದ್ದಾರೆ. ಈ ಹಿನ್ನೆಲೆ ತನ್ನ ಉತ್ತರಾಧಿಕಾರಿಯನ್ನು ಸ್ವೀಕರಿಸಲು ಸಂಕಲ್ಪ ಮಾಡಲಿದ್ದಾರೆ.
ಉಡುಪಿ ಕುಂಜಿಬೆಟ್ಟುವಿನ ಗುರುರಾಜ ಆಚಾರ್ಯ ಹಾಗು ವಿನುತಾ ಆಚಾರ್ಯ ದಂಪತಿಗಳ ಪುತ್ರ 27 ವರ್ಷದ ಇಂಜಿನಿಯರ್ ಪದವೀಧರರಾದ ಪ್ರಶಾಂತ್ ಆಚಾರ್ಯ ಎಂಬ ವಟುವನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ಸ್ವೀಕರಿಸಲು ಸಂಕಲ್ಪ ಮಾಡಲಿದ್ದಾರೆ. ಅವರು ಸಂಸ್ಕೃತದ ಜ್ಞಾನವನ್ನು ಹೊಂದಿದ್ದು, ಬಾಲ್ಯದಿಂದಲೇ ಆಧ್ಯಾತ್ಮಿಕ ಒಲವಿದ್ದುದರಿಂದ ಜಾತಕವನ್ನು ಪರಿಶೀಲಿಸಿ ಆಯ್ಕೆ ಮಾಡಾಲಾಗಿದೆ ಎಂದು ಪುತ್ತಿಗೆ ಮಠದ ಮೂಲಗಳು ತಿಳಿಸಿವೆ.
ಹಿರಿಯಡ್ಕ ಸಮೀಪದ ಶ್ರೀ ಪುತ್ತಿಗೆ ಗ್ರಾಮದಲ್ಲಿರುವ ಶ್ರೀ ಪುತ್ತಿಗೆ ಮಠದ ಮೂಲ ಮಠದಲ್ಲಿ ಸೋಮವಾರದಂದು 11-45ರ ಮುಹೂರ್ತದಲ್ಲಿ ದ್ವಂದ್ವ ಮಠವಾದ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಹಾಗು ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ಸ್ವಾಮೀಜಿಗಳ ಸಮಕ್ಷಮದಲ್ಲಿ ಶಿಷ್ಯ ಸ್ವೀಕಾರ ಕಾರ್ಯ ನಡೆಯಲಿದೆ. ಅದಮಾರು ಮಠದ ಪರ್ಯಾಯವಾದ ನಂತರ ಪುತ್ತಿಗೆ ಮಠದ ಪರ್ಯಾಯದ ಸರತಿ ಬರಲಿದೆ.
ಇತ್ತೀಚಿಗಷ್ಟೇ ಪರ್ಯಾಯ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥರು ತಮ್ಮ ಉತ್ತರಾಧಿಕಾರಿಯಾಗಿ ಶೈಲೇಶ್ ಉಪಾಧ್ಯಾಯ ಎಂಬ ವಟುವನ್ನು ಆಯ್ಕೆ ಮಾಡಿದ್ದರು. ಇನ್ನೊಂದು ವಿಶೇಷವೆಂದರೆ ಅಷ್ಟ ಮಠಕ್ಕೆ ಇಬ್ಬರು ಹೊಸ ಯತಿಗಳು ಸೇರ್ಪಡೆಗೊಂಡಂತಾಗುತ್ತದೆ.