ಬಂಟ್ವಾಳ, ಏ 21(Daijiworld News/SM): ಮಂಗಳೂರು ನಗರಕ್ಕೆ ನೇತ್ರಾವತಿ ನದಿಯ ತುಂಬೆ ವೆಂಟೆಡ್ ಡ್ಯಾಂನಲ್ಲಿ ನೀರಿನ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಪರಿಣಾಮ ಮಂಗಳೂರು ಮಹಾನಗರದ ಜನತೆಗೆ ಕುಡಿಯುವ ನೀರಿನ ಭೀತಿ ಎದುರಾಗುವ ಲಕ್ಷಣಗಳು ಗೋಚರಿಸುತ್ತಿವೆ.
ಬಂಟ್ವಾಳ ತಾಲೂಕಿನ ತುಂಬೆ ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಮಂಗಳೂರು ಮಹಾನಗರ ಪಾಲಿಕೆಗೆ ಸೇರಿದ ತುಂಬೆ ವೆಂಟೆಡ್ ಡ್ಯಾಂನ ಇಂದಿನ ನೀರಿನ ಮಟ್ಟ 5.28 ಸೆ.ಮೀ ಗೆ ಇಳಿಕೆಯಾಗಿದೆ. ಉರಿಯುವ ಸುಡು ಬಿಸಿಲಿಗೆ ನೀರು ಪ್ರತಿನಿತ್ಯ 5 ಸೆ.ಮೀ. ನಷ್ಟು ಅವಿಯಾಗುತ್ತಿದೆ ಎನ್ನಲಾಗಿದೆ. ಬಿಸಿಲ ಬೇಗೆ ಇದೇ ರೀತಿ ಮುಂದುವರೆದಲ್ಲಿ ಮುಂದಿನ 38 ದಿನಗಳಿಗೆ ಮಾತ್ರ ಸಾಕಾಗುವಷ್ಟು ಕುಡಿಯುವ ನೀರು ಸಿಗಬಹುದು ಎಂದು ಹೇಳಲಾಗುತ್ತಿದೆ.
ಒಂದು ವೇಳೆ ಮೇ ತಿಂಗಳಲ್ಲಿ ಮಳೆ ಬಂದರೆ ಮಾತ್ರ ಈ ಬಾರಿ ಕುಡಿಯುವ ನೀರಿಗೆ ತೊಂದರೆ ಯಾಗದು ಎನ್ನಲಾಗುತ್ತಿದೆ. ಇಲ್ಲದಿದ್ದಲ್ಲಿ ಮಂಗಳೂರಿಗೆ ಕುಡಿಯುವ ನೀರಿಗೆ ತಾತ್ವರ ಎದುರಾಗುವ ಲಕ್ಷಣಗಳಿವೆ ಎನ್ನಲಾಗಿದೆ.
ಇದೇ ರೀತಿ ದಿನದಿಂದ ದಿನಕ್ಕೆ ನೀರಿನ ಮಟ್ಟ ಕುಸಿತ ಕಂಡು ಬಂದರೆ ಮೇ ಕೊನೆಯಲ್ಲಿ ನೀರಿನ ಅಭಾವ ಉಂಟಾಗುವ ಸಾಧ್ಯತೆ ಇರುವುದರಿಂದ ಅದರ ಮೊದಲೇ ಎಚ್ಚರಿಕೆ ವಹಿಸಬೇಕು ಎಂಬ ನಿಟ್ಟಿನಲ್ಲಿ ಮಂಗಳೂರು ಜನತೆಗೆ ಕುಡಿಯುವ ನೀರನ್ನು ವಾರಕ್ಕೆ ನಾಲ್ಕೇ ದಿನ ನೀಡಲು ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ಈಗಾಗಲೇ ನಿರ್ಧರಿಸಿದೆ.
ಇನ್ನು ಇದೀಗ ಒಂದೆಡೆ ನೀರಿನ ಮಟ್ಟ ಕಡಿಮೆಯಾಗುತ್ತಲೇ ತುಂಬೆ ಡ್ಯಾಂ ನ ಸನಿಹ ಯಾರನ್ನು ಕೂಡಾ ಸಿಬ್ಬಂದಿಗಳು ಬಿಡುತ್ತಿಲ್ಲ. ಇದನ್ನು ಸಾರ್ವಜನಿಕರು ಪ್ರಶ್ನಿಸಿದರೆ, ಸಿಬ್ಬಂದಿಗಳ ಬಳಿ ಉತ್ತರವಿಲ್ಲ ಎನ್ನಲಾಗಿದೆ. ಹಾಗಾಗಿ ಈ ನೀರು ಕುಡಿಯಲು ಅಲ್ಲದೆ ಇತರ ಉದ್ದೇಶಗಳಿಗೆ ಉಪಯೋಗವಾಗುತ್ತಿದೆಯಾ ಎಂಬ ಸಂಶಯವನ್ನು ಸಾರ್ವಜನಿಕರು ವ್ಯಕ್ತಪಡಿಸಿದ್ದು, ಡ್ಯಾಂ ಪಕ್ಕ ಯಾರನ್ನೂ ಬಿಡದಿರುವ ಪ್ರಸಂಗ ಇದಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ.
ತುಂಬೆ ಡ್ಯಾಂನಲ್ಲಿರುವ ನೀರು ಕುಡಿಯುವ ಉದ್ದೇಶಕ್ಕಾಗಿ ಬಳಸಿದರೆ ಮೇ ಅಂತ್ಯದವರೆಗೆ ಯಾವುದೇ ತೊಂದರೆಯಿಲ್ಲದೆ ನೀರು ಪೂರೈಕೆಯಾಗಬಹುದೆನ್ನುವುದು ತಜ್ಞರ ಮಾತು. ಇನ್ನು ಡ್ಯಾಂ ಗೇಟ್ ಒಳಗೆ ಯಾರೂ ಕೂಡ ಹೋಗಬಾರದು ಎಂದು ಅದೇಶ ಮಾಡಿದ ಉದ್ದೇಶವಾದರೂ ಏನು ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.