ಉಡುಪಿ, ಏ 21(Daijiworld News/SM): ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ನಿರಂತರವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ಸಿಎಂ ಕುಮಾರಸ್ವಾಮಿ ಇಂದು ಅಂತಿಮ ಹಂತದ ಚುನಾವಣಾ ಕಾರ್ಯ ಮುಗಿಸಿ ವಿಶ್ರಾಂತಿ ಪಡೆಯಲು ತೆರಳಿದ್ದಾರೆ. ಈ ವೇಳೆ ಮಾಧ್ಯಮದವರನ್ನು ಕಂಡ ಸಿಎಂ ಗರಂ ಆಗಿದ್ದು, ಮಾಧ್ಯಮ ಪ್ರತಿನಿಧಿಗಳ ವಿರುದ್ಧ ಹರಿಹಾಯ್ದಿದ್ದಾರೆ.
ಕ್ಯಾಮೆರಾಗಳನ್ನು ಕಂಡು ಕೋಪಗೊಂಡ ಸಿಎಂ ಕುಮಾರಸ್ವಾಮಿ, ಯಾರ್ರೀ ಇವರನ್ನ ಒಳಗೆ ಬಿಟ್ಟವರು. ಸ್ವಲ್ಪನೂ ಮ್ಯಾನರ್ಸ್ ಇಲ್ವೇನ್ರೀ ಇವರಿಗೆ? ಮಾಧ್ಯಮಗಳಿಗೆ ಮಾಹಿತಿ ಕೊಟ್ಟೋರ್ ಯಾರ್ರಿ..? ಖಾಸಗಿ ಕಾರ್ಯಕ್ರಮ ಅಂತ ಗೊತ್ತಿಲ್ವಾ? ಕಾಮನ್ ಸೆನ್ಸ್ ಇಲ್ವಾ ನಿಮಗೆ? ಎಂದು ಗರಂ ಆಗಿದ್ದಾರೆ.
ಉಡುಪಿಯ ಹೆಲ್ತ್ ರೆಸಾರ್ಟ್ ಆಗಿರುವ ಕಾಪುವಿನ ಮೂಳೂರುನಲ್ಲಿರುವ ಸಾಯಿರಾಧಾ ರೆಸಾರ್ಟಿನಲ್ಲಿ ಸಿಎಂ ಎಚ್ಡಿ ಕುಮಾರಸ್ವಾಮಿ ಮೂರು ದಿನ ವಿಶ್ರಾಂತಿ ಪಡೆಯಲಿದ್ದಾರೆ. ಈ ಅವಧಿಯಲ್ಲಿ ಪಂಚಕರ್ಮ ಚಿಕಿತ್ಸೆ, ಧ್ಯಾನ, ಯೋಗದಲ್ಲಿ ಸಿಎಂ ಪಾಲ್ಗೊಳ್ಳಲಿದ್ದಾರೆ.
ಎರಡನೇ ಹಂತದ ಮತದಾನ ವೇಳೆ ಮಂಡ್ಯ ಕ್ಷೇತ್ರ ಸೇರಿದಂತೆ ಹಲವು ಅಭ್ಯರ್ಥಿಗಳ ಪರ ಸಿಎಂ ಕುಮಾರಸ್ವಾಮಿ ಅವರು ಪ್ರಚಾರ ನಡೆಸಿದ್ದರು. ಅಲ್ಲದೇ 3ನೇ ಹಂತದ ಮತದಾನ ಏ.23 ರಂದು ನಡೆಯುವುದಿಂದ ರವಿವಾರದಿಂದ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದ್ದು, ಈ ಅವಧಿಯಲ್ಲಿ ಸಿಎಂ ಶಿವಮೊಗ್ಗದಲ್ಲಿ ಮಧು ಬಂಗಾರಪ್ಪ ಸೇರಿದಂತೆ ಮೈತ್ರಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದರು. ನಿರಂತರ ಪ್ರಚಾರದಲ್ಲಿ ತೊಡಗಿದ್ದ ಪರಿಣಾಮ ಸಿಎಂ ಸದ್ಯ ವಿಶ್ರಾಂತಿಯ ಮೊರೆ ಹೋಗಿದ್ದಾರೆ.
ಗುಪ್ತವಾಗಿ ಹೆಲ್ತ್ ರೆಸಾರ್ಟ್ ಗೆ ಭೇಟಿ ನೀಡಬೇಕೆಂದಿದ್ದ ಸಿಎಂಗೆ ಮಾಧ್ಯಮದವರನ್ನು ಕಂಡು ಇರುಸು ಮುರುಸು ಉಂಟಾಯಿತು. ಈ ಹಿನ್ನೆಲೆ ಪೊಲೀಸ್ ಅಧಿಕಾರಿಗಳನ್ನು ಸಿಎಂ ತರಾಟೆಗೆ ತೆಗೆದುಕೊಂಡಿದ್ದಾರೆಂದು ತಿಳಿದು ಬಂದಿದೆ.