ಕುಂಬಳೆ,(Daijiworld News/MSP): ಹಳಿ ದಾಟುತ್ತಿದ್ದಾಗ ರೈಲು ಢಿಕ್ಕಿ ಹೊಡೆದು ತಾಯಿ ಮತ್ತು ಮಗು ಸಾವಿಗೀಡಾದ ಘಟನೆ ಕುಂಬಳೆಯ ಮೊಗ್ರಾಲ್ ನಾಂಗಿಯಲ್ಲಿ ಏ.20 ರಂದು ರಾತ್ರಿ ನಡೆದಿದೆ.
ಮೃತಪಟ್ಟವರನ್ನು ಮೊಗ್ರಾಲ್ ಪೆರುವಾಡ್ ನಾಂಗಿಯ ಅಲಿ ಅವರ ಪತ್ನಿ ಸುಹೈರಾ (28) ಮತ್ತು ಪುತ್ರ ಷಹಸಾದ್ (5) ಎಂದು ಗುರುತಿಸಲಾಗಿದೆ. ಉಮ್ರಾ ಪ್ರವಾಸದಿಂದ ಮರಳಿದ್ದ ಕುಂಬಳೆ ಪೇರಾಲ್ ನಿವಾಸಿಗಳಾದ ಸಂಬಂಧಿಕರನ್ನು ಮಾತನಾಡಿಸಲೆಂದು ಸುಹೈರಾ ತಮ್ಮ ಪುತ್ರ ಹಾಗೂ ಅತ್ತೆ ಜತೆ ತೆರಳಿದ್ದರು. ರೈಲು ಹಳಿ ಬಳಿಯೇ ಇರುವ ಮನೆಗೆ ರಾತ್ರಿ ವಾಪಾಸ್ ಆದಾಗ ಅತ್ತೆ ದಾಟಿ ಮನೆ ತಲುಪಿದ್ದಾರೆ. ಸುಹೈರಾ ಮನೆ ತಲುಪದ ಹಿನ್ನಲೆಯಲ್ಲಿ ಮತ್ತೆ ಹುಡುಕಿಕೊಂಡು ಬಂದಾಗ ರೈಲು ಹಳಿಯಲ್ಲಿ ಅವರಿಬ್ಬರ ಶವ ಪತ್ತೆಯಾಗಿದೆ. ರಾತ್ರಿ ೮.೩೦ ರ ಸುಮಾರಿಗೆ ಮಂಗಳೂರು ಕಡೆಗೆ ತೆರಳುತ್ತಿದ್ದ ರೈಲು ಡಿಕ್ಕಿ ಹೊಡೆದಿರಬಹುದು ಎನ್ನಲಾಗಿದೆ.
ಎರಡು ಹಳಿಗಳಲ್ಲಿ ರೈಲು ಏಕಕಾಲಕ್ಕೆ ಆಗಮಿಸಿದ್ದರಿಂದ ಈ ಅವಘಡ ಸಂಭವಿಸಿದ್ದರಬಹುದು ಎನ್ನಲಾಗಿದೆ. ಸುಹೈರಾ ಪತಿ ದುಬೈನಲ್ಲಿದ್ದು ಅವರು ಬಂದ ಬಳಿಕವೇ ಮೃತದೇಹಗಳ ಅಂತ್ಯ ಸಂಸ್ಕಾರ ನಡೆಸಲಾಗುವುದು ಎಂದು ಸಂಬಂಧಿಕರು ತಿಳಿಸಿದ್ದಾರೆ. ಕುಂಬಳೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.