ವಿಟ್ಲ, ನ 15 : ಮಕ್ಕಳ ಹುಟ್ಟುಹಬ್ಬ ಬಂತೆಂದ್ರೆ ಚಾಕ್ಲೋಟ್ ಹಂಚೋದು ಸಾಮಾನ್ಯ ಆದ್ರೆ ಇಲ್ಲೊಬ್ಬರು ಹೆತ್ತವರು ತನ್ನ ಮಗ ಹುಟ್ಟುಹಬ್ಬದ ಉಡುಗೊರೆಯಾಗಿ ಆತ ಕಲಿಯುವ ಶಾಲೆಗೆ ವಿಶಿಷ್ಟ ಸೇವೆಯೊಂದನ್ನು ಸಲ್ಲಿಸಿದ್ದಾರೆ. ಮಂಚಿ-ಕುಕ್ಕಾಜೆಯ ಸರಕಾರಿ ಶಾಲಾ ವಿದ್ಯಾರ್ಥಿಯ ಪೋಷಕರೊಬ್ಬರು ಮಾತ್ರ ಮಗ ಕಲಿಯುವ ಶಾಲಾ ತರಗತಿ ಪೈಯಿಂಟ್, ಗೋಡೆಗೆ ಚಿತ್ರ ಬರಹ ಮಾಡಿಸಿಕೊಟ್ಟು, ಭೇಷ್ ಎನಿಸಿಕೊಂಡಿದ್ದಾರೆ. ಸಲ್ಮಾನ್ ಫಾರೀಸ್ ಕುಕ್ಕಾಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ೫ನೇ ತರಗತಿಯಲ್ಲಿ ಕಲಿಯುತ್ತಿದ್ದಾನೆ. ಈತನ ಹುಟ್ಟುಹಬ್ಬಕ್ಕೆ ಏನಾದರೊಂದು ಹೊಸ ರೀತಿಯಲ್ಲಿ ಉಡುಗೊರೆ ನೀಡಲು ತಂದೆ ಅಬ್ದುಲ್ ಸತ್ತಾರ್ ನಂದರಬೆಟ್ಟು ಯೋಚನೆ ಮಾಡುತ್ತಾ ಇದ್ದರು. ಆ ಸಂದರ್ಭದಲ್ಲಿ ಅವರ ಸ್ನೇಹಿತನೊಬ್ಬರು ನೀಡಿದ ಸಲಹೆಯಂತೆ, ಮಗ ಕಲಿಯುವ ಶಾಲೆಯ ತರಗತಿ ಕೊಠಡಿ ಗೋಡೆಗೆ ಪೈಯಿಂಟ್ ಮಾಡಿಸಲು ನಿರ್ಧರಿಸಿದರು. ಸತ್ತಾರ್ ನೀಡಿದ ನೆರವಿನಲ್ಲಿ ಸಹಾಯದಲ್ಲಿ ತರಗತಿಯ ಹೊರಗಿನ ಗೋಡೆಯಲ್ಲಿ ಹಸಿರಿನ ಚಿಂತನೆಯಲ್ಲಿ ಭೂಮಿಯನ್ನ ಉಳಿಸಿ ಎನ್ನುವ ಚಿತ್ರ ಕೂಡ ಬಿಡಿಸಲಾಗಿದೆ. ತರಗತಿಯ ಬೋರ್ಡ್ ರಚಿಸಲಾಗಿದೆ.
ಪೋಷಕರ ಈ ಚಿಂತನೆಯನ್ನು ಶಾಲಾ ಶಿಕ್ಷಕ ವರ್ಗ, ಪೋಷಕರು ಹಾಗೂ ಎಸ್ಡಿಎಂಸಿ ಅಭಿನಂದಿಸಿದ್ದು, ಇದೊಂದು ಮಾದರಿಯಾಗಿ ಶಿಕ್ಷಣ ಸೇವೆ ಎಂದು ಶ್ಲಾಘಿಸಿದ್ದಾರೆ. ನಾವು ಮಕ್ಕಳ ಹುಟ್ಟುಹಬ್ಬಕ್ಕೆ ಬೇಕಾದಷ್ಟು ಖರ್ಚು ಮಾಡುವಾಗ, ನಮ್ಮ ಮಕ್ಕಳು ಕಲಿಯುವ ಶಾಲೆಗೆ ಏನಾದರೊಂದು ಸೇವೆ ಸಲ್ಲಿಸಬೇಕೆಂದು ಚಿಂತಿಸಿ ಸತ್ತಾರ್ ಅವರು ನೀಡಿದ ಉಡುಗೊರೆ ಇತರ ಪೋಷಕರಿಗೆ ಮಾದರಿಯಾಗಲಿದೆ ಎಂದು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಅಬ್ದುಲ್ ಹಮೀದ್ ಪುಚ್ಚೆಕರೆ ಪ್ರತಿಕ್ರಿಯಿಸಿದ್ದಾರೆ.
ತಮ್ಮ ಮಕ್ಕಳು ಓದುವ ಶಾಲೆಯ ಬಗ್ಗೆ ಪೋಷಕರು ಅಭಿಮಾನ, ಗೌರವ ಹೊಂದಿದ್ದಾರೆ ಎನ್ನುವುದಕ್ಕೆ ಸತ್ತಾರ್ ಅವರ ನಿದರ್ಶನಯಾಗಿದ್ದಾರೆ. ಎಲ್ಲಾ ಪೋಷಕರು ಶಾಲಾಭಿವೃದ್ಧಿಯ ಕಡೆಗೆ ಚಿಂತನೆ ಹರಿಸಲು ಇದೊಂದು ಸಕಾರಾತ್ಮಕ ಪ್ರಯತ್ನ ಎಂದು ಶಾಲಾ ಮುಖ್ಯಶಿಕ್ಷಕಿ ರೋಹಿಣಿ ತಿಳಿಸಿದ್ದಾರೆ.