ಉಜಿರೆ, ನ 15: ಧರ್ಮಸ್ಥಳದ ದೀಪೋತ್ಸವದಲ್ಲಿ ಬರೋಡಾ ಬಲೂನ್ಗಳು ಜನರನ್ನು ಆಕರ್ಷಿಸುತ್ತಿವೆ.ಧರ್ಮಸ್ಥಳದ ಮುಖ್ಯದ್ವಾರದಿಂದ ಹಲವು ಕಡೆ ಕೈಯಲ್ಲಿ ದೊಡ್ಡದಾದ ಬಣ್ಣ ಬಣ್ಣದ ಬಲೂನ್ಗಳನ್ನು ಹಿಡಿದು ಬರೋಡಾದ ವ್ಯಾಪಾರಿಗಳು ಜನರನ್ನು ಚಿತ್ತ ಸೆಳೆಯುತ್ತಿದ್ದಾರೆ. ಸಾಮಾನ್ಯವಾಗಿ ಜಾತ್ರೆಯ ಸಂದರ್ಭದಲ್ಲಿ ಬಣ್ಣದ ಪುಟ್ಟ ಬಲೂನ್ಗಳು ಕಾಣಸಿಗುತ್ತವೆ. ಆದ್ರೆ ಇವರು ಮಾರಾಟ ಮಾಡುವ ಬಲೂನ್ಗಳ ಗಾತ್ರಕ್ಕೆ ಮರುಳಾಗಿ ಜನರು ಕೊಂಡುಕೊಳ್ಳುತ್ತಿದ್ದಾರೆ.ಗುಜರಾತಿನ ಬರೋಡಾದ ವ್ಯಾಪಾರಿಗಳದ ಇವರು ಗುಜರಾತಿ ಮಿಶ್ರಿತ ಹಿಂದಿ ಮಾತನಾಡುತ್ತಾರೆ. ಇದೇ ಮೊದಲ ಬಾರಿಗೆ ಇಲ್ಲಿಗೆ ಆಗಮಿಸಿ ಬಲೂನ್ಗಳ ಮಾರಾಟದಲ್ಲಿ ತೊಡಗಿಕೊಂಡಿದ್ದಾರೆ.
ಹಾಗೆಂದು ಇವರ ಮೂಲ ಕಸುಬು ಬಲೂನು ಮಾರಾಟವಲ್ಲ. ಬರೋಡಾದಲ್ಲಿ ಒಬ್ಬರ ಕೈ ಕೆಳಗೆ ಕೆಲಸ ಮಾಡುವವರು. ಬಟ್ಟೆ ಹೊಲಿಯುವುದು, ಹಾಳಾದ ಪ್ಲಾಸ್ಟಿಕ್ ಬಕೆಟ್ಗಳ ರಿಪೇರಿ ಇಂತಹ ಕೆಲಸಗಳನ್ನು ನಿರ್ವಹಿಸುವರರು. ಬಲೂನ್ ಮಾರಾಟದಲ್ಲಿ ದುಡಿದ ಹಣವೂ ಇವರ ಕೈ ಸೇರುವುದಿಲ್ಲ. ಬಂದ ಹಣವನ್ನೆಲ್ಲ ತಮ್ಮ ಮಾಲೀಕನಿಗೆ ಕೊಟ್ಟು, ಆತ ನೀಡಿದ ಹಣದಲ್ಲಿ ಜೀವನ ಸಾಗಿಸುತ್ತಾರೆ.ದಿನದ ಊಟಕ್ಕಾಗಿ ಮಾಲೀಕನ ಮುಂದೆ ನಿಲ್ಲುವ ಈ ಜನರು, ಗೊತ್ತುಗುರಿಯಿಲ್ಲದ ಊರಿನಲ್ಲಿ ದುಡಿಮೆ ಮಾಡುತ್ತಿದ್ದಾರೆ. ಬಂದ ಹಣದಲ್ಲಿ ಎಷ್ಟು ಪಾಲು ತಮಗೆ ಸಿಗುತ್ತದೆ ಎಂದ ಯೋಚನೆಯೂ ಇಲ್ಲದೆ ಬಿಸಿಲು, ಚಳಿಯಲ್ಲಿ ಬಲೂನ್ಗಳ ಮಾರಾಟದಲ್ಲಿ ತೊಡಗಿದ್ದಾರೆ.10 ರೂಪಾಯಿಗಳಿಂದ 100 ರೂಪಾಯಿಯ ಬಲೂನ್ ಮಾರಾಟ ಮಾಡುತ್ತಿರುವ ಇವರು ತೀರಾ ಹಿಂದುಳಿದ ವರ್ಗದಿಂದ ಬಂದವರು.