ಉಡುಪಿ, ಏ 22 (Daijiworld News/MSP): ಅಷ್ಟಮಠಗಳಲ್ಲಿ ಒಂದಾಗಿರುವ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಪಟ್ಟದ ಉತ್ತರಾಧಿಕಾರಿಯಾಗಿ ಎಂಜಿನಿಯರಿಂಗ್ ಪದವೀಧರ ಪ್ರಶಾಂತ ಆಚಾರ್ಯ (27) ಅವರನ್ನು ಸ್ವೀಕರಿಸಿದ್ದಾರೆ.ಗುರುಪರಂಪರೆಯಲ್ಲಿ 31ನೇ ಯತಿಗಳಾಗಿ ನೇಮಕವಾದ ಪ್ರಶಾಂತ ಅವರಿಗೆ ಶುಭಸೂಚಕವಾಗಿ "ಸುಶ್ರೀಂದ್ರತೀರ್ಥ " ಎಂದು ನಾಮಕರಣ ಮಾಡಲಾಯಿತು
ಎ. 22ರಂದು ಪೂರ್ವಾಹ್ನ 11.45ಕ್ಕೆ ಹಿರಿಯಡಕ ಸಮೀಪದ ಶ್ರೀ ಪುತ್ತಿಗೆ ಮೂಲ ಮಠದಲ್ಲಿ ಶಾಸ್ತ್ರೋಸ್ತ್ರವಾಗಿ ನಡೆದ ಸರಳ ಕಾರ್ಯಕ್ರಮದ ಮೂಲಕ ಮಠದ ಪಟ್ಟಕ್ಕೆ ಕಿರಿಯ ಯತಿಗಳನ್ನಾಗಿ ನೇಮಿಸಿದರು.
ಪ್ರಶಾಂತ ಆಚಾರ್ಯ ಅವರು ಕುಂಜಿಬೆಟ್ಟಿನ ಗುರುರಾಜ ಆಚಾರ್ಯ ಮತ್ತು ವಿನುತಾ ಆಚಾರ್ಯ ದಂಪತಿಯ ಪುತ್ರರಾಗಿದ್ದು ಇಂಜಿನಿಯರಿಂಗ್ ಪದವೀಧರರಾಗಿದ್ದಾರೆ. ಸಂಸ್ಕೃತದ ಬಗ್ಗೆ ಮೂಲಜ್ಞಾನವನ್ನು ಸಂಪಾಧಿಸಿದ್ದಾರೆ.
ಇನ್ನು ಶ್ರೀ ಪುತ್ತಿಗೆ ಮಠದ ಶ್ರೀ ಉಪೇಂದ್ರತೀರ್ಥ ಶ್ರೀಪಾದರ 750 ವರ್ಷಗಳ ಗುರುಪರಂಪರೆಯಲ್ಲಿ 30ನೇ ಯತಿಗಳಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ತಮ್ಮ 12ನೇ ವಯಸ್ಸಿನಲ್ಲಿ ಬಾಲ ಸನ್ಯಾಸ ಸ್ವೀಕರಿಸಿದ್ದರು. ಸೋಮವಾರದಂದು ಸನ್ಯಾಸ ಸ್ವೀಕರಿಸಿ 45 ಸಂವತ್ಸರಗಳನ್ನು ಪೂರೈಸಿದ್ದಾರೆ.