ಮಂಗಳೂರು,ಏ 22 (Daijiworld News/MSP): ನಗರದಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಶಿಸ್ತು ತರಲು ಪ್ರಯತ್ನಿಸುತ್ತಿರುವ ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್ ಅವರು ಸಂಚಾರ ನಿಯಮಗಳ ಉಲ್ಲಂಘನೆ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದಾರೆ.
ವಾರಾಂತ್ಯವಾದ ಏ.20 ರ ಶನಿವಾರ ಹಾಗೂ ಏ.21ರ ಭಾನುವಾರದ ನಗರದಲ್ಲಿ ಮದ್ಯಪಾನ ಮಾಡಿ ವಾಹನ ಚಲಾಯಿಸಿದ 200 ಪ್ರಕರಣಗಳನ್ನು ಸಂಚಾರ ಪೊಲೀಸರು ದಾಖಲಿಸಿಕೊಂಡಿದ್ದಾರೆ. ಮಾತ್ರವಲ್ಲದೆ ಬಸ್ಸುಗಳಲ್ಲಿ ಕರ್ಕಶ ಹಾಗೂ ಹೆಚ್ಚಿನ ಶಬ್ದ ಉಂಟು ಮಾಡುವ ಹಾರ್ನ್ ವಿರುದ್ದ ಕಾರ್ಯಾಚರಣೆ ನಡೆಸಿ ಕರ್ಕಶ ಹಾರ್ನ್ ಗಳನ್ನು ತೆರವುಗೊಳಿಸಿ, ಬಸ್ಗಳ ಕರ್ಕಶ ಹಾರ್ನ್ ವಿರುದ್ಧ 54 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
ಇನ್ನು ಐಪಿಎಲ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿಸಿಕೊಂಡಿದ್ದವರಿಗೆ ಬಿಸಿ ಮುಟ್ಟಿಸಿದ್ದ ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್ ಮೀಟರ್ ಬಡ್ಡಿ ದಂಧೆ ನಡೆಸುವವರ ಮೇಲೂ ಕಣ್ಣಿಟ್ಟಿದ್ದಾರೆ. ಮೀಟರ್ ಬಡ್ಡಿ ದಂಧೆ ಕಾನೂನು ಬಾಹಿರವಾಗಿದ್ದು, ಇಂತಹ ದಂಧೆ ನಡೆಸುವವರ ವಿರುದ್ದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಹಾಗೂ ಮೀಟರ್ ಬಡ್ಡಿ ದಂಧೆ ನಡೆಸುವವರ ಮಾಹಿತಿ ಇದ್ದರೆ ಪೊಲೀಸರಿಗೆ ಮಾಹಿತಿ ನೀಡುವಂತೆ ಸಂದೀಪ್ ಪಾಟೀಲ್ ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.