ಬಂಟ್ವಾಳ, ಏ 22 (Daijiworld News/SM): ಮನೆಗೆ ನುಗ್ಗಿ ಕಳವುಗೈದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಯೂಸುಬ್ ಬ್ಯಾರಿ ಎಂಬವರ ಪುತ್ರ ಸಾದಿಕ್ ಬಂಧಿತ ಆರೋಪಿಯಾಗಿದ್ದಾನೆ.
ದ.ಕ. ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಲಕ್ಷ್ಮೀ ಪ್ರಸಾದ್ ಮಾರ್ಗದರ್ಶನದಂತೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಆರೋಪಿ ಕಳವು ಗೈದ ಸುಮಾರು 62 ಗ್ರಾಂ ಚಿನ್ನದ ಒಡವೆಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಮಾರ್ಚ್ 19ರಂದು ಬೆಳ್ತಂಗಡಿ ತಾಲ್ಲೂಕು ಕುಕ್ಕಳ ಗ್ರಾಮದ ಗಂಪ ದಡ್ಡ ಯೂಸುಬ್ ಬ್ಯಾರಿ ಅವರ ಮನೆಯ ಹಿಂಬಾಗಿಲನ್ನು ಒಡೆದು ಮನೆಯೊಳಗೆ ಪ್ರವೇಶಿಸಿ ಮನೆಯ ಒಳಗೆ ಇದ್ದ ಒಡವೆಗಳನ್ನು ಆರೋಪಿ ಕಳವು ಮಾಡಿದ್ದ.
ಈ ಬಗ್ಗೆ ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಕಾರ್ಯಾಚರಣೆಗೆ ಇಳಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.