ಬಂಟ್ವಾಳ, ಏ.23 (Daijiworld News/MSP): ತುಂಬೆಯ ಹೊಸ ಡ್ಯಾಂನಲ್ಲಿ 5.20 ಮೀಟರ್ ನಷ್ಟು ನೀರು ಇದ್ದರೂ ರೇಶನಿಂಗ್ ಹೆಸರಿನಲ್ಲಿ ಮಂಗಳೂರು ಮಹಾನಗರದ ಜನರಿಗೆ ಅಸಮರ್ಪಕವಾಗಿ ನೀರು ಪೂರೈಸಿ ಸತಾಯಿಸುವ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಹೇಳಿದ್ದಾರೆ.
ಅವರು ಮಂಗಳೂರು ನಗರ ಉತ್ತರ ಶಾಸಕ ಡಾ|ಭರತ್ ಶೆಟ್ಟಿ ವೈ ಹಾಗೂ ಬಿಜೆಪಿಯ ಮಾಜಿ ಮನಪಾ ಸದಸ್ಯರೊಂದಿಗೆ ತುಂಬೆ ಹೊಸ ವೆಂಟೆಂಡ್ ಡ್ಯಾಂ ಹಾಗೂ ಶಂಭೂರಿನಲ್ಲಿರುವ ಎಎಂಆರ್ ಡ್ಯಾಂಗಳನ್ನು ಪರಿಶೀಲಿಸಿದ ನಂತರ ಮಾಧ್ಯಮದೊಂದಿಗೆ ಮಾತನಾಡಿದರು.
ಭಾರತೀಯ ಜನತಾ ಪಾರ್ಟಿ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಹಿಂದೆ ಅಧಿಕಾರದಲ್ಲಿದ್ದಾಗ ನಾಲ್ಕು ಮೀಟರ್ ಎತ್ತರದ ತುಂಬೆಯ ಹಳೆಯ ಡ್ಯಾಂನಲ್ಲಿ ಕಡಿಮೆ ಪ್ರಮಾಣದಲ್ಲಿ ನೀರು ಇದ್ದಾಗಲೂ ಜನರಿಗೆ ತೊಂದರೆ ಆಗದಂತೆ ನೀರಿನ ಪೂರೈಕೆ ಮಾಡಿದ್ದೇವೆ. ಹಾಗಿರುವಾಗ ಈಗ ಏಳು ಮೀಟರ್ ಎತ್ತರದ ಹೊಸ ಅಣೆಕಟ್ಟು ಇದೆ. ಅದರಲ್ಲಿ ಆರು ಮೀಟರ್ ಎತ್ತರದಷ್ಟು ನೀರು ನಿಲ್ಲಿಸಲಾಗುತ್ತದೆ. ಈಗ ಪ್ರಸ್ತುತ 5.20 ಮೀಟರ್ ಎತ್ತರದಷ್ಟು ನೀರು ಇದೆ. ಹೀಗಿರುವುದರಿಂದ ಸದ್ಯ ರೇಶನಿಂಗ್ ಅಗತ್ಯ ಇಲ್ಲ. ಇನ್ನು ರೇಶನಿಂಗ್ ಮಾಡುವುದರಿಂದ ಪಾಲಿಕೆ ವ್ಯಾಪ್ತಿಯ ಎತ್ತರದ ಪ್ರದೇಶಗಳಲ್ಲಿ 30% ಏರಿಯಾಗಳಿಗೆ ನೀರು ಪೂರೈಕೆಯಾಗುತ್ತಿಲ್ಲ. ರೇಶನಿಂಗ್ ಮಾಡುವಾಗ 48 ಗಂಟೆ ಪಂಪಿಂಗ್ ನಿಲ್ಲಿಸಿದರೆ ಕೊಳವೆಯಲ್ಲಿ ಸಂಪೂರ್ಣ ನೀರು ಖಾಲಿಯಾಗಿ ಏರ್ ಲಾಕ್ ಆಗುವುದರಿಂದ ಎತ್ತರದ ಪ್ರದೇಶಗಳಿಗೆ ನೀರು ತಲುಪುವಾಗ ಎರಡು ದಿನ ಬೇಕಾಗುತ್ತದೆ ಎಂದು ಶಾಸಕ ಕಾಮತ್ ತಿಳಿಸಿದರು.
ನೀರಿನ ರೇಶನಿಂಗ್ ಮಾಡುವುದಾದರೆ ಮೊದಲು ಚರ್ಚೆ ನಡೆಯಬೇಕು. ಹಿಂದಿನ ಬಾರಿ ಈ ಸಮಯದಲ್ಲಿ ಇದ್ದ ನೀರಿನ ಪ್ರಮಾಣ, ಇದ್ದ ನೀರಿನ ಅವಶ್ಯಕತೆ ಎಲ್ಲವನ್ನು ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿ ನಂತರ ಮುಂದಿನ ನಿರ್ಧಾರ ಕೈಗೊಳ್ಳುವ ಅವಶ್ಯಕತೆ ಇದೆ. ಅದಕ್ಕಾಗಿ ಮಂಗಳವಾರ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು ಎಂದು ಹೇಳಿದ ಶಾಸಕ ಕಾಮತ್ ಮಳೆಗಾಲ ಆರಂಭವಾಗುವ ಮೊದಲೇ ಚರಂಡಿಗಳಲ್ಲಿ, ರಾಜಕಾಲುವೆಗಳಲ್ಲಿ ಹೂಳೆತ್ತುವ ಕಾರ್ಯ ಆರಂಭವಾಗಿದೆ. ಆದರೆ ರಾಜ ಕಾಲುವೆ ಆರಂಭವಾಗಿ ಕೊನೆಯ ತನಕ ಸಂಪೂರ್ಣ ಹೂಳೆತ್ತುವ ಕೆಲಸ ನಡೆಯಬೇಕು. ಈಗ ರಾಜ ಕಾಲುವೆಯ ಆರಂಭದ ಕಡೆಗಳಲ್ಲಿ ಮಾತ್ರ ಹೂಳೆತ್ತಲಾಗುತ್ತಿದೆ ಎನ್ನುವ ವಿಷಯ ತಮ್ಮ ಗಮನಕ್ಕೆ ಬಂದಿದೆ. ಈ ಬಗ್ಗೆ ಕೂಡ ಮುಂದಿನ ದಿನಗಳಲ್ಲಿ ಕೃತಕ ನೆರೆ ಬರದ ರೀತಿಯಲ್ಲಿ ಏನು ಕ್ರಮ ಕೈಗೊಳ್ಳಬೇಕು ಎನ್ನುವ ಬಗ್ಗೆ ಕೂಡ ಚರ್ಚಿಸಲಾಗುವುದು ಎಂದು ಶಾಸಕ ಕಾಮತ್ ತಿಳಿಸಿದರು.
ಶಾಸಕ ಡಾ|ಭರತ್ ಶೆಟ್ಟಿ, ಮಾಜಿ ಮೇಯರ್ ಗಣೇಶ್ ಹೊಸಬೆಟ್ಟು, ಮಾಜಿ ಮನಪಾ ಸದಸ್ಯರಾದ ನವೀನ್ ಚಂದ್ರ, ಪ್ರೇಮಾನಂದ ಶೆಟ್ಟಿ, ಸುಧೀರ್ ಶೆಟ್ಟಿ ಕಣ್ಣೂರು, ರೂಪಾ ಡಿ ಬಂಗೇರ, ವಿಜಯ ಕುಮಾರ್ ಶೆಟ್ಟಿ, ಸುರೇಂದ್ರ, ಮೀರಾ ಕರ್ಕೇರಾ, ಪೂರ್ಣಿಮಾ, ರಾಜೇಶ್, ಬಿಜೆಪಿ ಮುಖಂಡರಾದ ನಿತಿನ್ ಕುಮಾರ್, ರವಿಶಂಕರ್ ಮಿಜಾರ್, ವಸಂತ ಜೆ ಪೂಜಾರಿ ಉಪಸ್ಥಿತರಿದ್ದರು