ಮಂಗಳೂರು,ಏ 23 (Daijiworld News/MSP): ಮಲ್ಲೂರು ಬಳಿಯ ಉದ್ದಬೆಟ್ಟು ಹೈದ್ರೋಸಿಯ ಜುಮಾ ಮಸೀದಿಯ 13ನೇ ತ್ರೈ ವಾರ್ಷಿಕ ನೇರ್ಚೆ ಕಾರ್ಯಕ್ರಮದಲ್ಲಿ ಭಾನುವಾರ ನಡೆದ ಅನ್ನದಾನ ಹಿಂದೂ - ಮುಸ್ಲಿಂ ಸೌಹಾರ್ದಕ್ಕೆ ಸಾಕ್ಷಿಯಾಯಿತು.
ಸಾಂದರ್ಭಿಕ ಚಿತ್ರ
ಮಲ್ಲೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವತಿಯಿಂದ ಸುಮಾರು 20 ಮಂದಿಯ ತಂಡ ಅನ್ನದಾನದಲ್ಲಿ ಭಕ್ತರಿಗೆ ಅನ್ನಬಡಿಸುವ ಕಾರ್ಯಕ್ರಮದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಹಲವು ವರ್ಷಗಳಿಂದ ದೇವಸ್ಥಾನದ ಯುವಕರು ಮಸೀದಿಯ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ ಮಾತ್ರವಲ್ಲದೆ ಹರಕೆಯನ್ನು ಸಲ್ಲಿಸುತ್ತಾರೆ. ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶ ಮೇ ತಿಂಗಳಲ್ಲಿ ನಡೆಯಲಿದ್ದು, ದೇವಸ್ಥಾನದ ಕರ ಸೇವೆಯಲ್ಲೂ ಮುಸ್ಲಿಂ ಬಾಂಧವರು ಭಾಗವಹಿಸಲಿದ್ದಾರೆ.
ಬ್ರಹ್ಮಕಲಶ ಸಂದರ್ಭದಲ್ಲಿಯೂ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ. ಮಸೀದಿ ಹಾಗೂ ದೇವಸ್ಥಾನದ ಮೂಲಕ ಹಿಂದೂ- ಮುಸ್ಲಿಂ ಸೌಹಾರ್ದ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.